Supreme Court 
ಸುದ್ದಿಗಳು

ಅಕ್ರಮ ಮತಾಂತರವು ಡಕಾಯಿತಿ, ಅತ್ಯಾಚಾರ, ಕೊಲೆಯಷ್ಟು ಗಂಭೀರ ಅಪರಾಧವಲ್ಲ: ಸುಪ್ರೀಂ ಕೋರ್ಟ್

ಬಾಲಕನನ್ನು ಇಸ್ಲಾಂಗೆ ಮತಾಂತರಿಸಿದ ಆರೋಪದ ಮೇಲೆ ಮೌಲ್ವಿಗೆ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯ ಮತ್ತು ಅಲಾಹಾಬಾದ್ ಹೈಕೋರ್ಟನ್ನು ಪೀಠ ಟೀಕಿಸಿದೆ.

Bar & Bench

ಅಕ್ರಮವಾಗಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸುವುದು ಕೊಲೆ, ಡಕಾಯಿತಿ ಅಥವಾ ಅತ್ಯಾಚಾರದಂತಹ ಗಂಭೀರ ಅಪರಾಧವಲ್ಲ ಎಂದಿರುವ ಸುಪ್ರೀಂ ಕೋರ್ಟ್ ಬುದ್ಧಿಮಾಂದ್ಯ ಬಾಲಕನನ್ನು ಇಸ್ಲಾಂಗೆ ಮತಾಂತರಿಸಿದ ಆರೋಪ ಹೊತ್ತಿದ್ದ ಮೌಲ್ವಿಯೊಬ್ಬರಿಗೆ ಜಾಮೀನು ನೀಡಿದೆ.

ಜಾಮೀನು ಅರ್ಜಿಯನ್ನು ಪರಿಗಣಿಸುವಾಗ ತಮ್ಮ ವಿವೇಚನೆ ಹೇಗೆ ಚಲಾಯಿಸಬೇಕು ಎಂಬ ಕುರಿತು ಸಮ್ಮೇಳನ, ಉಪನ್ಯಾಸ ಕಾರ್ಯಕ್ರಮಗಳಿಗೆ ಹಾಜರಾಗಿದ್ದರೂ  ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ತಿರಸ್ಕರಿಸಲು ತಮ್ಮ ವಿವೇಚನೆ ಹೆಚ್ಚಾಗಿ ಬಳಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಇದೇ ವೇಳೆ ಟೀಕಿಸಿದೆ.

"ವಿಚಾರಣಾ ನ್ಯಾಯಾಧೀಶರಿಗೆ ಸಿಆರ್‌ಪಿಸಿ ಸೆಕ್ಷನ್ 439 ಅಥವಾ ಬಿಎನ್‌ಎಸ್‌ಎಸ್ ಸೆಕ್ಷನ್ 483ರ ವ್ಯಾಪ್ತಿ ತಿಳಿಯದ ಕಾರಣಕ್ಕೆ ಜಾಮೀನು ಅರ್ಜಿ ಪರಿಗಣಿಸುವಾಗ ತಮ್ಮ ವಿವೇಚನೆಯನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ವಿಚಾರಣಾ ನ್ಯಾಯಾಧೀಶರು ಅರ್ಥಮಾಡಿಕೊಳ್ಳುವುದಕ್ಕಾಗಿ ಪ್ರತಿ ವರ್ಷ ಹಲವು ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ ಜಾಮೀನು ನಿರಾಕರಿಸಿದ್ದಕ್ಕಾಗಿ ಅಲಾಹಾಬಾದ್‌ ಹೈಕೋರ್ಟನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರಿಗೆ ಜಾಮೀನು ನೀಡುವ ಮೂಲಕ ಹೈಕೋರ್ಟ್ ತನ್ನ ವಿವೇಚನೆಯನ್ನು ಚಲಾಯಿಸಬೇಕಿತ್ತು ಎಂದು ನಾವು ಅಭಿಪ್ರಾಯಪಡುತ್ತಿದ್ದೇವೆ. ಜಾಮೀನು ನಿರಾಕರಿಸಲು ಹೈಕೋರ್ಟ್‌ಗೆ ಯಾವುದೇ  ಸಕಾರಣವಿಲ್ಲ. ಇಲ್ಲಿ ಆರೋಪಿಸಿರುವ ಕೃತ್ಯ ಕೊಲೆ, ಡಕಾಯಿತಿ, ಅತ್ಯಾಚಾರ ಇತ್ಯಾದಿಗಳಂತಹ ಗಂಭೀರ ಅಪರಾಧವಲ್ಲ. ವಿಚಾರಣಾ ನ್ಯಾಯಾಲಯ ಜಾಮೀನು ನೀಡುವ ಧೈರ್ಯವನ್ನು ಅಪರೂಪವಾಗಿ  ಒಗ್ಗೂಡಿಸಿಕೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬಹುದಾದರೂ ಅಂತಹ ಧೈರ್ಯವನ್ನು ಉಚ್ಚ ನ್ಯಾಯಾಲಯವಾದರೂ ತೋರಬೇಕಿತ್ತು ಎಂಬ ನಿರೀಕ್ಷೆ ಇದೆ ಎಂದು ನ್ಯಾಯಾಲಯ ವಿವರಿಸಿದೆ.

ಜಾಮೀನು ನಿರಾಕರಿಸಲು ಹೈಕೋರ್ಟ್‌ಗೆ ಯಾವುದೇ  ಸಕಾರಣವಿಲ್ಲ. ಇಲ್ಲಿ ಆರೋಪಿಸಿರುವ ಕೃತ್ಯ ಕೊಲೆ, ಡಕಾಯಿತಿ, ಅತ್ಯಾಚಾರ ಇತ್ಯಾದಿಗಳಂತಹ ಗಂಭೀರ ಅಪರಾಧವಲ್ಲ.
ಸುಪ್ರೀಂ ಕೋರ್ಟ್

ಐಪಿಸಿ ಸೆಕ್ಷನ್ 504 (ಶಾಂತಿ ಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಮೌಲ್ವಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದು ತನ್ನ ಬಳಿಯವರೆಗೂ ವಿಚಾರಣೆಗೆ ಬರಬೇಕಾದಂತಹ ಪ್ರಕರಣವಲ್ಲ ಎಂದು ಕೂಡ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

"ವಾಸ್ತವವಾಗಿ, ಪ್ರಕರಣ ಸುಪ್ರೀಂ ಕೋರ್ಟ್‌ ತಲುಪಬಾರದಿತ್ತು. ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಚಲಾಯಿಸಲು ಮತ್ತು ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಕಷ್ಟು ಧೈರ್ಯ ತೋರಬೇಕಿತ್ತು. ಸೂಕ್ತವಾದ ನಿಯಮ ಮತ್ತು ಷರತ್ತುಗಳನ್ನು ವಿಧಿಸಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಿತ್ತು” ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್‌ಗಳಲ್ಲದೆ ಇದೀಗ ದುರದೃಷ್ಟವಶಾತ್ ದೇಶದ ಸುಪ್ರೀಂ ಕೋರ್ಟ್‌ ಕೂಡ ಜಾಮೀನು ಅರ್ಜಿಗಳಿಂದ ಮುಳುಗಿ ಹೋಗಿರುವುದಕ್ಕೆ ಇದೂ ಒಂದು ಕಾರಣ ಎಂದ ಪೀಠ ಅರ್ಜಿದಾರರ ಮನವಿ ಪುರಸ್ಕರಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Maulvi_Syed_Shah_Kazmi_vs_UP.pdf
Preview