ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಗಾದಿಯಂತಹ ಲಾಭದಾಯಕ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ಎಸ್ ಆರ್ ವಿಶ್ವನಾಥ್ ಅವರನ್ನು ಯಲಹಂಕ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ.
ಬೆಂಗಳೂರಿನ ವಕೀಲ ಎ ಎಸ್ ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಸುದೀರ್ಘ ವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ತೀರ್ಪು ಕಾಯ್ದಿರಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು “ಕಾನೂನು ಪ್ರಕಾರ ಶಾಸಕರು ಸರ್ಕಾರದ ಅಧೀನ ಸಂಸ್ಥೆಗೆ ಸಂಬಂಧಿಸಿದ ಸಮಿತಿಯಲ್ಲಿ ಸದಸ್ಯರಾಗಿರಬಹುದು. ಆದರೆ, ಬಿಡಿಎ ಸಮಿತಿಯಲ್ಲಿ ಅಲ್ಲ. ಬಿಡಿಎ ಶಾಸನಾತ್ಮಕವಾಗಿ ರಚಿಸಲ್ಪಟ್ಟಿರುವ ಪ್ರಾಧಿಕಾರವಾಗಿದ್ದು, ಅದಕ್ಕೆ ಅಧ್ಯಕ್ಷರಾಗಿ ಶಾಸಕ ಎಸ್ ಆರ್ ವಿಶ್ವನಾಥ್ ನೇಮಕಗೊಂಡಿದ್ದಾರೆ. ಆ ಅಧ್ಯಕ್ಷ ಹುದ್ದೆಗೆ ವೇತನ ಪಡೆಯುತ್ತಿದ್ದಾರೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ಶಾಸಕರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಲಾಭದಾಯಕ ಹುದ್ದೆ ಹೊಂದಿರುವ ವಿಶ್ವನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಮತ್ತು ಶಾಸಕ ಎಸ್ ಆರ್ ವಿಶ್ವನಾಥ್ ಪರ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಶಾಸಕರನ್ನು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ವೇತನ ಹಾಗೂ ಭತ್ಯೆ ಪಡೆಯುತ್ತಿಲ್ಲ. ಕೇವಲ ಬಿಡಿಎ ಅಧ್ಯಕ್ಷ ಹುದ್ದೆಗೆ ವೇತನ ಹಾಗೂ ಭತ್ಯೆ ಪಡೆಯುತ್ತಿದ್ದಾರೆ. ಹೀಗಾಗಿ, ವಿಶ್ವನಾಥ್ ಬಿಡಿಎ ಅಧ್ಯಕ್ಷ ಗಾದಿಯಂತಹ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಹೇಳಲಾಗದು. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಯಲಹಂಕ ಕ್ಷೇತ್ರದಿಂದ ಎಸ್ ಆರ್ ವಿಶ್ವನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಂವಿಧಾನದ 191(1)(ಎ) ವಿಧಿ ಪ್ರಕಾರ ಸಂಸದರು ಹಾಗೂ ಶಾಸಕರಾಗಿರುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಎಸ್ ಆರ್ ವಿಶ್ವನಾಥ್ ಅವರು ಬಿಡಿಎ ಅಧ್ಯಕ್ಷ ಹುದ್ದೆಗೆ ವೇತನ ಮತ್ತು ಭತ್ಯೆ ಸೇರಿದಂತೆ ಒಟ್ಟು 1.92 ಲಕ್ಷ ರೂಪಾಯಿ ಮಾಸಿಕ ಪಡೆದುಕೊಳ್ಳುತ್ತಿದ್ದಾರೆ. ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಹುದ್ದೆ ಈ ಎರಡಕ್ಕೂ ಸರ್ಕಾರದಿಂದ ವೇತನ ಪಡೆದುಕೊಳ್ಳುತ್ತಿರುವ ಕಾರಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.