MLA S R Vishwanath and Karnataka HC 
ಸುದ್ದಿಗಳು

ಬಿಡಿಎ ಲಾಭದಾಯಕ ಹುದ್ದೆ ಪ್ರಕರಣ: ವಿಶ್ವನಾಥ್‌ ಶಾಸಕತ್ವ ಅನರ್ಹಗೊಳಿಸಲು ಕೋರಿಕೆ; ಸರ್ಕಾರಕ್ಕೆ‌ ಹೈಕೋರ್ಟ್‌ ನೋಟಿಸ್

ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಶಾಸಕ ಎಸ್‌ ಆರ್‌ ವಿಶ್ವನಾಥ್‌ ಅವರು ಆಕ್ಷೇಪಣೆ ಸಲ್ಲಿಸಬೇಕು. ಶಾಸಕ ವಿಶ್ವನಾಥ್‌ ಅವರಿಗೆ ಅರ್ಜಿದಾರರು ಹ್ಯಾಂಡ್‌ ನೋಟಿಸ್‌ ನೀಡಲು ಅನುಮತಿಸಲಾಗಿದೆ ಎಂದು ಪೀಠವು ಆದೇಶ ಮಾಡಿದೆ.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ನೇಮಕವಾಗುವ ಮೂಲಕ ಲಾಭದಾಯಕ ಹುದ್ದೆ ಹೊಂದಿರುವ ಎಸ್‌ ಆರ್‌ ವಿಶ್ವನಾಥ್‌ ಅವರನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಸದಸ್ಯತ್ವದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಲಾಗಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಶಾಸಕ ವಿಶ್ವನಾಥ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಹರೀಶ್‌ ಎ ಎಸ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಶಾಸಕ ವಿಶ್ವನಾಥ್‌ ಅವರು ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿದಾರರು ಶಾಸಕ ವಿಶ್ವನಾಥ್‌ ಅವರಿಗೆ ಹ್ಯಾಂಡ್‌ ನೋಟಿಸ್‌ ನೀಡಲು ಅನುಮತಿಸಲಾಗಿದೆ ಎಂದು ಪೀಠವು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಿನ್ಸ್‌ ಐಸಾಕ್‌ ಅವರು “ನಿಯಮಾವಳಿಗಳ ಪ್ರಕಾರ ಬಿಡಿಎ ಅಧ್ಯಕ್ಷರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಶಾಸಕರಾಗಿರುವ ವಿಶ್ವನಾಥ್‌ ಅವರು ಕ್ಷೇತ್ರದ ಕೆಲಸಗಳನ್ನೂ ಮಾಡಬೇಕಿರುವುದರಿಂದ ನಿಯಮದ ಪ್ರಕಾರ ಇಲ್ಲಿ ಕೆಲಸ ಮಾಡಲಾಗದು. ಅಲ್ಲದೇ, ಶಾಸನ ಸಭೆಯ ಸದಸ್ಯರು ಯಾವುದೇ ಲಾಭದಾಯ ಹುದ್ದೆ ಹೊಂದುವಂತಿಲ್ಲ ಎಂದು ಸಂವಿಧಾನದ 191 (1)(ಎ) ವಿಧಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದರು.

2020ರ ನವೆಂಬರ್‌ 24ರಂದು ರಾಜ್ಯ ಸರ್ಕಾರವು ವಿಶ್ವನಾಥ್‌ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸುವಾಗ ಯಾವುದೇ ತೆರನಾದ ಪಾರದರ್ಶಕ ವಿಧಾನವನ್ನು ಪಾಲಿಸಿಲ್ಲ. ಅಲ್ಲಿಂದ ಇಲ್ಲಿಯವರೆಗೆ ವಿಶ್ವನಾಥ್‌ ಅವರು ಲಾಭದಾಯಕ ಹುದ್ದೆ ಹೊಂದಿದ್ದು, ಸರ್ಕಾರದಿಂದ ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ವಿಶ್ವನಾಥ್‌ ನೇಮಕಾತಿಯು ಸಂವಿಧಾನದ 191 (1)(ಎ) ವಿಧಿಗೆ ವಿರುದ್ಧವಾಗಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಬಿಡಿಎ ಕಾಯಿದೆ 1976ರ ಸೆಕ್ಷನ್‌ 6ರ ಅಡಿ ಸದಸ್ಯರನ್ನು ಸರ್ಕಾರವು ವಜಾ ಮಾಡಬಹುದಾಗಿದೆ. ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತೆ ಮಾಸಿಕವಾಗಿ ಬಿಡಿಎ ಅಧ್ಯಕ್ಷರಿಗೆ 1.92 ಲಕ್ಷ ರೂಪಾಯಿ ದೊರೆಯುತ್ತದೆ. ಇದು ಲಾಭದಾಯಕ ಹುದ್ದೆ ಎಂಬುದು ಸ್ಪಷ್ಟಪಡಿಸುತ್ತದೆ. ಈ ಸಂಬಂಧ ವಿಶ್ವನಾಥ್‌ ಅವರನ್ನು ಸಂವಿಧಾನದ 192 (1) ವಿಧಿ ಅಡಿ ಅನರ್ಹಗೊಳಿಸುವಂತೆ ಕೋರಿ 2021ರ ಆಗಸ್ಟ್‌ 4ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ವಿವರಿಸಲಾಗಿದೆ.

ಬಿಡಿಎ ಅಧ್ಯಕ್ಷರಾಗಿ ವಿಶ್ವನಾಥ್‌ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಈ ಹಿಂದೆ ಮನವಿ ಸಲ್ಲಿಸಲಾಗಿದ್ದು, ಆ ಪ್ರಕರಣದಲ್ಲೂ ನ್ಯಾಯಾಲಯ ಶಾಸಕರಿಗೆ ನೋಟಿಸ್‌ ಜಾರಿ ಮಾಡಿದೆ. ಮೊದಲಿಗೆ ನೋಟಿಸ್‌ ಪಡೆಯಲು ನಿರಾಕರಿಸಿದ್ದ ವಿಶ್ವನಾಥ್‌ ಅವರು ಅರ್ಜಿದಾರರು ಹ್ಯಾಂಡ್‌ ನೋಟಿಸ್‌ ನೀಡಿದ್ದನ್ನು ಸ್ವೀಕರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.