ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಏಳು ವರ್ಷಗಳ ಬಳಿಕ ಆರೋಪ ಪಟ್ಟಿ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರ ಕಾರ್ಯವೈಖರಿಗೆ ಈಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಪ್ರಕರಣದಿಂದ ಅಧಿಕಾರಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸಿದೆ.
ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಬೆಂಗಳೂರಿನ ಪಿ ರಂಗಸ್ವಾಮಿ ಅವರು 1977ರಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರು. ಆನಂತರ ಪರೀಕ್ಷೆ ಬರೆದು 1981ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದರು. 1982ರಿಂದ 2006ರ ನಡುವಿನ ಸೇವಾವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ 2006ರ ಜೂನ್ 8ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದಾದ ಏಳು ವರ್ಷಗಳ ನಂತರ ಅಂದರೆ 2011ರ ಮಾರ್ಚ್ 10ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು.
ಇದರಿಂದ ತನ್ನ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿ ರಂಗಸ್ವಾಮಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಆದಾಯವನ್ನು ಪರಿಗಣಿಸಿದ್ದ ಲೋಕಾಯುಕ್ತ ನ್ಯಾಯಾಲಯವು ರಂಗಸ್ವಾಮಿ ಅವರ ಅರ್ಜಿ ಪುರಸ್ಕರಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು 2013ರಲ್ಲಿ ಹೈಕೋರ್ಟ್‌ಗೆ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದಲ್ಲಿ 2006ರ ಜೂನ್ 8ರಂದು ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ತನಿಖಾಧಿಕಾರಿಗಳು, ಸೋರ್ಸ್ ರಿಫೋರ್ಟ್ ಆಧರಿಸಿ ರಂಗಸ್ವಾಮಿ ಅವರ ನಿವಾಸದ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದರು. ಅದಾಗಿ ಏಳು ವರ್ಷ ಕಳೆದ ನಂತರ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಮೂಲಕ ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ವಿಫಲವಾಗಿದೆ. ಮತ್ತೊಂದೆಡೆ ರಂಗಸ್ವಾಮಿ ಅವರ ಕುಟುಂಬ ಸದಸ್ಯರ ಸ್ವತಂತ್ರ ಮೂಲಗಳ ಆದಾಯ ಪರಿಗಣಿಸಿಯೂ ಆರೋಪಗಳನ್ನು ಲೋಕಾಯುಕ್ತ ನ್ಯಾಯಾಲಯ ಕೈಬಿಟ್ಟಿದೆ. ಈ ಆದೇಶ ಸೂಕ್ತವಾಗಿದ್ದು, ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ರಂಗಸ್ವಾಮಿ ಅವರ ಪರವಾಗಿ ವಕೀಲೆ ಪಿ ಎಲ್ ವಂದನಾ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ವಾದಿಸಿದ್ದರು. ಲೋಕಾಯುಕ್ತ ಪೊಲೀಸರನ್ನು ವಕೀಲ ಬಿ ಎಸ್ ಪ್ರಸಾದ್ ಪ್ರತಿನಿಧಿಸಿದ್ದರು.