Punjab and Haryana High Court 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆಯ ಮಗುವಿನ ತಂದೆಯ ಹೆಸರು ಹೇಳುವಂತೆ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಬಾರದು: ಪಂಜಾಬ್ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತರು ಮತ್ತವರ ಮಕ್ಕಳ ಕಲ್ಯಾಣ ಹಾಗೂ ಪುನರ್ವಸತಿಗಾಗಿ ಹೊರಡಿಸಲಾಗುತ್ತಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶಿಸಿತು.

Bar & Bench

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮಗುವಿನ ತಂದೆಯ ಹೆಸರು ಹೇಳುವಂತೆ ಒತ್ತಾಯಿಸಬಾರದು ಎಂದು ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಕಚೇರಿಗಳಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.

ಅತ್ಯಾಚಾರ ಸಂತ್ರಸ್ತರು ಮತ್ತು ಅವರ ಮಕ್ಕಳ ಪುನರ್ವಸತಿಗೆ ಸಂಬಂಧಿಸಿದಂತೆ  ಅಮಿಕಸ್ ಕ್ಯೂರಿ ತನು ಬೇಡಿ ಅವರು ಸೂಚಿಸಿದ ಕ್ರಮಗಳನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಸಲಹೆಗಳನ್ನು ಜಾರಿಗೆ ತರುವಂತೆ ಸೂಚಿಸಿದರು.

“ಮಗುವಿನ ತಂದೆಯ ಹೆಸರಿಗಾಗಿ ಒತ್ತಾಯಿಸಬಾರದು ಎಂದು ಎಲ್ಲಾ ಕಚೇರಿಗಳು ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಿ” ಎಂದು ನ್ಯಾಯಾಲಯ ಆದೇಶಿಸಿದೆ.

ಸಲಹೆಗಳಿಗೆ ತಮ್ಮ ಅಭ್ಯಂತರವಿಲ್ಲ ಎಂದು ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಹೇಳಿದರು. ಕೆಲವು ಕ್ರಮಗಳನ್ನು ಈಗಾಗಲೇ ಅಳವಡಿಸಿಕೊಂಡು ಜಾರಿಗೆ ತರಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅತ್ಯಾಚಾರ ಸಂತ್ರಸ್ತರ ಗರ್ಭಪಾತದ ವೆಚ್ಚವನ್ನು ಕೂಡ ಅಧಿಕಾರಿಗಳು ಭರಿಸಬೇಕು ಎಂಬ ಅಂಶ ಕೂಡ ನ್ಯಾಯಾಲಯ ಜಾರಿಗೊಳಿಸಲು ಆದೇಶಿಸಿರುವ ಸಲಹೆಗಳಲ್ಲಿ ಸೇರಿದೆ.

ಒಂದು ವೇಳೆ ಅತ್ಯಾಚಾರ ಸಂಸತ್ರಸ್ತೆಯು ಮಗುವನ್ನು ತನ್ನೊಟ್ಟಿಗೆ ಇರಿಸಿಕೊಳ್ಳಲು ಬಯಸದೆ ಹೋದರೆ ಆ ಸಂದರ್ಭದಲ್ಲಿ ಮಗುವಿನ ಜನನದ ನಂತರ ತ್ವರಿತವಾಗಿ ಅದನ್ನು ದತ್ತು ನೀಡಲು ಅವಕಾಶವಾಗುವಂತೆ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸುವ ಸಲುವಾಗಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಅಥವಾ ಇನ್ನಾವುದೇ ಸೂಕ್ತ ಪ್ರಾಧಿಕಾರಗಳ ನೆರವು ಪಡೆಯಬೇಕು.

ಇದೇ ವೇಳೆ ಸಂತ್ರಸ್ತೆ ತನಗೆ ಜನಿಸಿದ ಮಗುವನ್ನು ತನ್ನೊಟ್ಟಿಗೆ ಇರಿಸಿಕೊಳ್ಳಲು ಬಯಸಿದರೆ ಮಗುವಿನ ಸೂಕ್ತ ಆರೋಗ್ಯಕರ, ಗೌರವಾನ್ವಿತ ಬೆಳವಣಿಗೆಗೆ ಎಲ್ಲಾ ನೆರವು ನೀಡಲು ಸರ್ಕಾರ ಪ್ರಯತ್ನಿಸಬೇಕು ಎಂದು ನ್ಯಾಯಾಲಯ ತಿಳಿಸಿತು.

ಅತ್ಯಾಚಾರ ಸಂತ್ರಸ್ತರು ಮತ್ತವರ ಮಕ್ಕಳ ಕಲ್ಯಾಣ ಹಾಗೂ ಪುನರ್ವಸತಿಗಾಗಿ ಹೊರಡಿಸಲಾಗುತ್ತಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆಯೂ ಪೀಠ ಅಧಿಕಾರಿಗಳಿಗೆ ನಿರ್ದೇಶಿಸಿತು.