Supreme Court 
ಸುದ್ದಿಗಳು

ಆರೋಪ ನಿಗದಿ ಕೈಬಿಟ್ಟರೂ ಅಪರಾಧ ಸಾಬೀತಾದರೆ ವಿಚಾರಣಾಧೀನ ನ್ಯಾಯಾಲಯ ದೋಷಿ ಎಂದು ಘೋಷಿಸಬಹುದು: ಸುಪ್ರೀಂ ಕೋರ್ಟ್‌

ಐಪಿಸಿ ಸೆಕ್ಷನ್‌ 304ಬಿ ಅಪರಾಧಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದರೂ ಐಪಿಸಿ ಸೆಕ್ಷನ್‌ 498ಎ (ಪತ್ನಿಯ ಮೇಲೆ ಕ್ರೌರ್ಯ ಎಸಗುವುದು) ಅಡಿ ಆರೋಪಕ್ಕೆ ದೋಷಿ ಎಂದು ಘೋಷಿಸಬಹುದು. ಸೆಕ್ಷನ್‌ 498ಎ ಗೆ ವಿಸ್ತೃತ ವ್ಯಾಪ್ತಿ ಇದೆ ಎಂದ ನ್ಯಾಯಾಲಯ.

Bar & Bench

ಆರೋಪ ನಿಗದಿ ಮಾಡುವ ಸಂದರ್ಭದಲ್ಲಿ ಹೆಸರು ಕೈಬಿಟ್ಟ ಮಾತ್ರಕ್ಕೆ ಅಥವಾ ಆರೋಪ ನಿಗದಿ ವೇಳೆ ಲೋಪದಿಂದ ಹೆಸರು ಕೈಬಿಟ್ಟು ಹೋದ ಮಾತ್ರಕ್ಕೆ ಆರೋಪಿಯನ್ನು ದೋಷಿ ಎಂದು ಘೋಷಿಸಲು ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ನಿರ್ಬಂಧವಿಲ್ಲ. ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಅಪರಾಧ ಸಾಬೀತಾದರೆ ವಿಚಾರಣಾಧೀನ ನ್ಯಾಯಾಲಯವು ಆರೋಪಿಯ ವಿರುದ್ಧ ಆರೋಪ ನಿಗದಿ ಆಗದೆ ಇದ್ದರೂ ದೋಷಿ ಎಂದು ತೀರ್ಮಾನಿಸಬಹುದು ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಹೇಳಿದೆ [ಪರನಗೌಡ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ].

ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಅತ್ತೆ-ಮಾವ ಅವರನ್ನು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಅರವಿಂದ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ದೋಷಿಗಳು ಎಂದು ಘೋಷಿಸುವ ವೇಳೆ ಮೇಲಿನ ವಿಚಾರ ಉಲ್ಲೇಖಿಸಿದೆ.

ಇಬ್ಬರು ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡುವಾಗ ಐಪಿಸಿ ಸೆಕ್ಷನ್‌ 306, ಆರೋಪದ ಭಾಗವಾಗದಿದ್ದರೂ ಅವರನ್ನು ಆ ಅಪರಾಧದಲ್ಲಿ ದೋಷಿಗಳು ಎಂದು ಘೋಷಿಸಲಾಗಿದೆ.

ಆರೋಪ ನಿಗದಿ ಮಾಡುವಾಗ ಆರೋಪ ಕೈಬಿಟ್ಟರೂ ಲಭ್ಯವಿರುವ ಸಾಕ್ಷ್ಯಾಧಾರಗಳ ಅನ್ವಯ ಆರೋಪಿಯನ್ನು ದೋಷಿ ಎಂದು ಘೋಷಿಸಲು ನ್ಯಾಯಾಲಯವನ್ನು ಯಾರೂ ತಡೆಯುವುದಿಲ್ಲ. ನ್ಯಾಯಾಲಯದ ಮುಂದಿರುವ ಇಂಥ ಪರಿಸ್ಥಿತಿಯನ್ನು ಬಗೆಹರಿಸಲು ಐಪಿಸಿಯಲ್ಲಿ ಸಾಕಷ್ಟು ನಿಬಂಧನೆಗಳಿವೆ. ವಿಚಾರಣಾಧೀನ ನ್ಯಾಯಾಧೀಶರು ಐಪಿಸಿ ಸೆಕ್ಷನ್‌ 306 ಜೊತೆಗೆ 498ಎ ಅನ್ನು ಕೈಬಿಟ್ಟ ಮಾತ್ರಕ್ಕೆ ಆ ಆರೋಪಗಳು ಸಾಬೀತಾದಾಗ ಆರೋಪಿಯನ್ನು ದೋಷಿ ಎಂದು ಘೋಷಿಸಲು ನಿರ್ಬಂಧ ಇಲ್ಲ. ಹಾಲಿ ಪ್ರಕರಣದಲ್ಲಿ ನಿರ್ದಿಷ್ಟ ಆರೋಪ ನಿಗದಿ ಮಾಡದಿರುವುದರಿಂದ ಆರೋಪಿಗೆ ಯಾವುದೇ ಅನ್ಯಾಯವಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಐಪಿಸಿ ಸೆಕ್ಷನ್‌ 304ಬಿ (ವರದಕ್ಷಿಣೆ ಕೊಲೆ) ಅಪರಾಧಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದರೂ ಐಪಿಸಿ ಸೆಕ್ಷನ್‌ 498ಎ (ಪತ್ನಿಯ ಮೇಲೆ ಕ್ರೌರ್ಯ) ಅಡಿ ಆರೋಪಕ್ಕೆ ದೋಷಿ ಎಂದು ಘೋಷಿಸಬಹುದು. ಏಕೆಂದರೆ, ಸೆಕ್ಷನ್‌ 498ಎ ಗೆ ವಿಸ್ತೃತ ವ್ಯಾಪ್ತಿ ಇದೆ ಎಂದು ನ್ಯಾಯಾಲಯ ವಿವರಿಸಿದೆ.

ಅತ್ತೆ-ಮಾವ ಅವರ ಕಿರುಕುಳ ತಾಳಲಾರದೇ ಮಹಿಳೆಯು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ತ ಮಹಿಳೆಯ ಸಾವಿನ ಉಯಿಲು ಆಧರಿಸಿ ಮೇಲ್ಮನವಿದಾರರಾದ ಅತ್ತೆ-ಮಾವ ಅವರನ್ನು ಐಪಿಸಿ ಸೆಕ್ಷನ್‌ 306 ಮತ್ತು 498ಎ ಅಡಿ ದೋಷಿಗಳು ಎಂದು ನ್ಯಾಯಾಲಯ ಆದೇಶಿಸಿದೆ.

“ಸಾವನ್ನಪ್ಪಿರುವ ಮಹಿಳೆಯ ಮರಣ ಹೇಳಿಕೆ ನೋಡಿದರೆ ಆಕೆಗೆ ನೀಡಿರುವ ಮಾನಸಿಕ ಕಿರುಕುಳದಿಂದ ಆಘಾತಗೊಂಡು, ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 306ರ ಅಡಿ ಆರೋಪ ನಿಗದಿ ಮಾಡದಿದ್ದರೂ ಅದರ ಅಡಿ ದೋಷಿಗಳು ಎಂದು ಘೋಷಿಸಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.