Election 
ಸುದ್ದಿಗಳು

ಮತದಾರರ ಪಟ್ಟಿಯಲ್ಲಿ ಲೋಪ: ಮಾಹಿತಿ ಪಡೆದು ತಿಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದ ಹೈಕೋರ್ಟ್‌

ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವುದಿಲ್ಲ. ಕೇಂದ್ರ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯ ಅಂಕಿ-ಅಂಶಗಳನ್ನೇ ಅವಲಂಬಿಸಲಿದೆ ಎಂದಿರುವ ಆಯೋಗ.

Bar & Bench

ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಪಗಳಿದೆ ಎನ್ನಲಾದ ವಿಚಾರ ಸಂಬಂಧ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಬೆಂಗಳೂರು ನವನಿರ್ಮಾಣ ಪಕ್ಷದ ಸಲ್ಲಿಸಿರುವ ಬೆಂಗಳೂರು ನವನಿರ್ಮಾಣ ಪಕ್ಷದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಶನಿವಾರಕ್ಕೆ (ಆಗಸ್ಟ್‌ 29) ಮುಂದೂಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಜಿಬಿಎ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಸಾವಿರಾರು ಲೋಪಗಳು ಕಂಡು ಬಂದಿವೆ. ಇದು ಲಕ್ಷಾಂತರ ಮತದಾರರನ್ನು ಸಮಸ್ಯೆಗಳಿಗೆ ದೂಡಲಿದೆ. ಅಷ್ಟಕ್ಕೂ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವುದಿಲ್ಲ. ಕೇಂದ್ರ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯ ಅಂಕಿ-ಅಂಶಗಳನ್ನೇ ಅವಲಂಬಿಸಲಿದೆ ಎಂದು ಪೀಠದ ಗಮನಕ್ಕೆ ತಂದರು.

ಈ ವಾದ ಆಲಿಸಿದ ಪೀಠವು ಅರ್ಜಿದಾರರು ಎತ್ತಿರುವ ಆಕ್ಷೇಪದ ಕುರಿತು ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರಿಗೆ ಸೂಚಿಸಿದ ಪೀಠ ವಿಚಾರಣೆಯನ್ನು ಶನಿವಾರ (ಆಗಸ್ಟ್‌ 29) ಮುಂದೂಡಿತು.