Justice UU Lalit
Justice UU Lalit 
ಸುದ್ದಿಗಳು

ಮೂರನೇ ರಾಷ್ಟ್ರೀಯ ಲೋಕ ಅದಾಲತ್‌: ಒಂದು ಕೋಟಿ ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥ

Bar & Bench

ಆಗಸ್ಟ್‌ 13ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದು ಕೋಟಿಗೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು (ಎನ್‌ಎಸ್‌ಎಲ್‌ಎಸ್‌ಎ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದರಲ್ಲಿ 75 ಲಕ್ಷ ದಾವೆ ಪೂರ್ವ ಪ್ರಕರಣ ಮತ್ತು 25 ಲಕ್ಷ ಬಾಕಿ ಇರುವ ಪ್ರಕರಣಗಳು ಸೇರಿದ್ದು, ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ ಒಂದು ಕೋಟಿ ದಾಟಿದೆ.

“ಪ್ರಸಕ್ತ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಮಾಡಲ್ಪಟ್ಟ ಪ್ರಕರಣಗಳ ಸಂಖ್ಯೆಯು ಒಂದು ಕೋಟಿ ಗಡಿ ದಾಟಿದ್ದು, ಸಂಧಾನದಿಂದ ₹9000 ಕೋಟಿ (₹90 ಶತಕೋಟಿ) ಪಾವತಿಯಾಗಿದೆ. ಈ ಮೂಲಕ ಹಿಂದಿನ ವರ್ಷದ ದಾಖಲೆ ಮುರಿದು ಇತಿಹಾಸ ಸೃಷ್ಟಿಯಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತರಾಗಿರುವ ಹಾಗೂ ಎನ್‌ಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರಾದ ಯು ಯು ಲಲಿತ್‌ ಅವರ ಮಾರ್ಗದರ್ಶನದಂತೆ ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಲೋಕ ಅದಾಲತ್‌ ನಡೆಸಲಾಗಿತ್ತು.

ಸ್ವಾತಂತ್ರ್ಯೋತ್ಸವ ಸಿದ್ಧತೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅದಾಲತ್‌ ನಡೆಸಲಾಗಿಲ್ಲ. ಆಗಸ್ಟ್‌ 20ರಂದು ದೆಹಲಿಯಲ್ಲಿ ಅದಾಲತ್‌ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಜನಸಾಮಾನ್ಯರಿಗೆ ಸುಲಭವಾಗಿ ಕಾನೂನು ಸೇವೆ ಲಭ್ಯವಾಗಲು, ಆರ್ಥಿಕವಾಗಿ ಹೊರಯಾಗದಂತೆ ಮಾಡಲು, ದಾವೆದಾರರಿಗೆ ಅನೌಪಚಾರಿಕವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಸಮಾಜದ ಬಡ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲು ಎನ್‌ಎಸ್‌ಎಲ್‌ಎಸ್‌ ಪ್ರತಿ ತ್ರೈಮಾಸಿಕಕ್ಕೊಮ್ಮೆ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸುತ್ತಿದೆ.