Justices L Nageswara Rao, D Y Chandrachud and Ravindra Bhat 
ಸುದ್ದಿಗಳು

ಲಸಿಕೆ ಬೆಲೆ: ಕೇಂದ್ರ ಸರ್ಕಾರದ ದ್ವಿಮುಖ ನೀತಿ ಪ್ರಶ್ನಿಸಿದ ಸುಪ್ರೀಂಕೋರ್ಟ್; ಬೇಗ ಎಚ್ಚರಗೊಳ್ಳಿ ಎಂದು ಕಿವಿಮಾತು

ಕೋವಿಡ್ ಲಸಿಕೆಗಳಿಗೆ ದೇಶದಲ್ಲಿ ಒಂದೇ ಬೆಲೆ ಇರಬೇಕು ಎಂದಿರುವ ನ್ಯಾಯಲಯ ಮತ್ತೊಂದೆಡೆ ಉತ್ತರಪ್ರದೇಶದಲ್ಲಿ ಭಾನುವಾರ ನಡೆದ ಘಟನೆಯೊಂದರ ಸುತ್ತ ಚಾಟಿ ಬೀಸಿದೆ.

Bar & Bench

ಕೋವಿಡ್‌ ಲಸಿಕೆ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಳೆದಿರುವ ದ್ವಿಮುಖ ನೀತಿಯನ್ನು ಸೋಮವಾರ ಪ್ರಶ್ನಿಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವಂತೆ ಕರೆ ನೀಡಿತು

“ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದರಿಂದ ಕಡಿಮೆ ಬೆಲೆಗೆ ಪಡೆಯುತ್ತಿರುವುದಾಗಿ ಕೇಂದ್ರ ಹೇಳುತ್ತಿದೆ. ಇದು ತರ್ಕಬದ್ಧವಾಗಿದ್ದರೆ ರಾಜ್ಯಗಳು ಏಕೆ ಹೆಚ್ಚಿನ ಬೆಲೆ ನೀಡಬೇಕು? ದೇಶಾದ್ಯಂತ ಲಸಿಕೆಗಳಿಗೆ ಒಂದೇ ಬೆಲೆ ನಿಗದಿಯಾಗಬೇಕು. ಕಳೆದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ಉಲ್ಬಣಿಸಿದೆ” ಎಂದು ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಲಸಿಕೆಗಾಗಿ ನೋಂದಾಯಿಸುವಾಗ ಗ್ರಾಮೀಣ ಪ್ರದೇಶದ ಜನರಿಗೆ ಎದುರಾಗುತ್ತಿರುವ ಡಿಜಿಟಲ್ ಕಂದರ ಬಗ್ಗೆಯೂ ನ್ಯಾಯಾಲಯ ಪ್ರಶ್ನಿಸಿತು.

“ಡಿಜಿಟಲ್‌ ಕಂದರದ ಬಗ್ಗೆ ಬಗ್ಗೆ ಏನು (ಹೇಳುತ್ತೀರಿ)? ಗ್ರಾಮೀಣ ಪ್ರದೇಶದ ಜನ ಕೋವಿನ್‌ ಅಪ್ಲಿಕೇಷನ್‌ ಮೂಲಕ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಬಹುದು ಎಂದು ನೀವು ಹೇಳುತ್ತೀರಿ. ನಮ್ಮ ಕಾನೂನು ಗುಮಾಸ್ತರು ಮತ್ತು ಕಾರ್ಯದರ್ಶಿಗಳು ಕೋವಿನ್‌ ಆಪ್‌ ಮೂಲಕ ನೋಂದಾಯಿಸಲು ಯತ್ನಿಸಿದ್ದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನಮಗೆ ಗೊತ್ತು” ಎಂದರು. ಇದೆಲ್ಲವನ್ನೂ ಸರಿಪಡಿಸಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಇದೇ ವೇಳೆ ಪೀಠ ಹೇಳಿತು. "ನಾವೇ ಇದೆಲ್ಲವನ್ನೂ ಮಾಡಬೇಕು ಎಂದರೆ ಹದಿನೈದು ದಿನದ ಹಿಂದೆಯೇ ಮಾಡಬಹುದಿತ್ತು. ನೀವು (ಕೇಂದ್ರ) ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಮಾರ್ಪಾಡುಗಳನ್ನು ಮಾಡಬೇಕು. ದಯವಿಟ್ಟು ಎಚ್ಚೆತ್ತುಕೊಳ್ಳಿ" ಎಂದು ನ್ಯಾಯಾಲಯ ಹೇಳಿತು.

“…ನೀವು ವಾಸ್ತವವನ್ನು ತಿಳಿಯಬೇಕು ದೇಶದಲ್ಲಿ ಏನು ನಡೆಯುತ್ತದೆ ಎಂಬುದನ್ನು ಅರಿಯಬೇಕು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ.
ನ್ಯಾ. ಡಿ ವೈ ಚಂದ್ರಚೂಡ್

ವೈಜ್ಞಾನಿಕ ಮತ್ತು ಪರಿಣತ ಜ್ಞಾನವನ್ನು ಆಧರಿಸಿ ಸಾರ್ವಜನಿಕ ಆರೋಗ್ಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅನುಕೂಲವಾಗುವಂತೆ ಸುಪ್ರೀಂಕೋರ್ಟ್‌ ಮೇ 8 ರಂದು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್‌) ರಚಿಸಿತ್ತು.

ಎನ್‌ಟಿಎಫ್ ಸ್ಥಾಪನೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ನ್ಯಾಯಾಲಯ, ಅಂತಹ ಕಾರ್ಯಪಡೆ ಸ್ಥಾಪಿಸುವುದರಿಂದ ನಿರ್ಧಾರ ಕೈಗೊಳ್ಳುವವರು ತಾತ್ಕಾಲಿಕ ಪರಿಹಾರಕ್ಕಿಂತಲೂ ಶಾಶ್ಬತ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುತ್ತದೆ ಎಂದಿದೆ. ನ್ಯಾ. ಚಂದ್ರಚೂಡ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಅಸಮಾಧಾನ

ಉತ್ತರಪ್ರದೇಶದಲ್ಲಿ ಸೇತುವೆ ಮೇಲಿನಿಂದ ಮೃತದೇಹವನ್ನು ಎಸೆದ ಘಟನೆಯನ್ನು ವರದಿ ಮಾಡಿದ ಸುದ್ದಿ ಚಾನೆಲ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆಯೋ ಇಲ್ಲವೋ ಎಂದು ಇದೇ ವೇಳೆ ಸುಪ್ರೀಂಕೋರ್ಟ್‌ ವ್ಯಂಗ್ಯವಾಡಿತು. ಮಾಧ್ಯಮಗಳು ಕೋವಿಡ್‌ ಸುದ್ದಿ ಪ್ರಸಾರ ಮಾಡುವುದನ್ನು ಸರ್ಕಾರಗಳು ಸ್ವೀಕರಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಸುಪ್ರೀಂಕೋರ್ಟ್‌ ಸೋಮವಾರ ಈ ಪ್ರಶ್ನೆ ಕೇಳಿತು.

ನ್ಯಾ. ಡಿ ವೈ ಚಂದ್ರಚೂಡ್‌ “"ನಿನ್ನೆ ಒಂದು ಸುದ್ದಿ ವಾಹಿನಿ ಮೃತ ದೇಹವನ್ನು ನದಿಗೆ ಎಸೆಯುತ್ತಿರುವುದನ್ನು ತೋರಿಸಿತು. ನ್ಯೂಸ್ ಚಾನೆಲ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆಯೆ ಎಂದು ಇನ್ನೂ ನನಗೆ ತಿಳಿದಿಲ್ಲ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಟೀಕಿಸಿದರು.

ಇಂತಹ ಟೀಕೆ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ಸಹಾಯ ಬಯಸುವವರ ವಿರುದ್ಧ ಸರ್ಕಾರಗಳು ಪ್ರಕರಣ ದಾಖಲಿಸಿದ್ದನ್ನು ಕೂಡ ನ್ಯಾಯಾಲಯ ಖಂಡಿಸಿತ್ತು.

ಏಪ್ರಿಲ್ 30 ರಂದು ನಡೆದ ಪ್ರಕರಣದ ವಿಚಾರಣೆ ವೇಳೆ ಕೋವಿಡ್‌ ಸಂಬಂಧಿತ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಬಗ್ಗೆ ಯಾವುದೇ ನಿರ್ಬಂಧ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಧಿಕಾರಿಗಳ ಅಂತಹ ಯಾವುದೇ ಕ್ರಮ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನ್ಯಾ. ಚಂದ್ರಚೂಡ್‌, ಎಲ್‌ ನಾಗೇಶ್ವರ ರಾವ್‌ ಮತ್ತು ರವೀಂದ್ರ ಭಟ್‌ ಅವರನ್ನೊಳಗೊಂಡ ಪೀಠ ಅಂದು ತಿಳಿಸಿತ್ತು.