North and South Block
North and South Block 
ಸುದ್ದಿಗಳು

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಆನ್‌ಲೈನ್ ಮಾಧ್ಯಮಗಳು ಮತ್ತು ಒಟಿಟಿ: ಕೇಂದ್ರ ಸರ್ಕಾರದ ಅಧಿಸೂಚನೆ

Bar & Bench

ಅಂತರ್ಜಾಲ ಆಧರಿತ ಡಿಜಿಟಲ್ /ಆನ್‌ಲೈನ್ ಮಾಧ್ಯಮಗಳನ್ನು ಹಾಗೂ ಅಂತರ್ಜಾಲ ವೇದಿಕೆಗಳ ಮೂಲಕ ಚಲನಚಿತ್ರ ಹಾಗೂ ದೃಶ್ಯ- ಶ್ರವಣ ಕಾರ್ಯಕ್ರಮಗಳನ್ನು ಒದಗಿಸುವ ಪೂರೈಕೆದಾರರನ್ನು (ಓಟಿಟಿ ಅಥವಾ ಸ್ಟ್ರೀಮಿಂಗ್ ವೇದಿಕೆಗಳು) ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತರುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ನವೆಂಬರ್ 9 ರಂದು ಹೊರಡಿಸಿದೆ.

ಸಂಪುಟ ಸಚಿವಾಲಯ ಹೊರಡಿಸಿರುವ ಅಧಿಸೂಚನೆ 22 ಎ ಮತ್ತು 22 ಬಿ ಎಂಬ ಎರಡು ಹೊಸ ನಮೂದುಗಳನ್ನು ನಿಯಮಗಳ ಎರಡನೇ ವರ್ಗದಲ್ಲಿ ಸೇರಿಸುವ ಮೂಲಕ 1961ರ ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿದೆ.

ಎರಡು ಹೊಸ ನಮೂದುಗಳು ಹೀಗಿವೆ:

  1. ಆನ್‌ಲೈನ್ ವಿಷಯ ಪೂರೈಕೆದಾರರಿಂದ ಲಭ್ಯವಾಗುವ ಚಲನಚಿತ್ರಗಳು ಮತ್ತು ದೃಶ್ಯ- ಶ್ರವಣ ಕಾರ್ಯಕ್ರಮಗಳು

  2. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯುವ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು.

ಡಿಜಿಟಲ್ ಮಾಧ್ಯಮ ಅನಿಯಂತ್ರಿತವಾಗಿದ್ದು ಅದಕ್ಕೆ ಕಣ್ಗಾವಲಿನ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಮಾಧ್ಯಮವನ್ನು ನಿಯಂತ್ರಿಸುವ ಯಾವುದೇ ಯತ್ನ ಮಾಡುವುದಿದ್ದರೆ ಅದನ್ನು ಡಿಜಿಟಲ್ ಮಾಧ್ಯಮದಿಂದಲೇ ಆರಂಭಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿತ್ತು. ಸುದರ್ಶನ್ ಟಿವಿಯ ವಿವಾದಾತ್ಮಕ "ಯುಪಿಎಸ್‌ಸಿ ಜಿಹಾದ್" ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಟಿವಿ ಚಾನೆಲ್‌ಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅಧಿಸೂಚನೆಯನ್ನು ಇಲ್ಲಿ ಓದಿ:

Cabinet_Notification.pdf
Preview