Ramya, Darshan  
ಸುದ್ದಿಗಳು

ನಟಿ ರಮ್ಯಾಗೆ ಆನ್‌ಲೈನ್‌ನಲ್ಲಿ ಬೆದರಿಕೆ: ಆರು ಮಂದಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

“ಅರ್ಜಿದಾರರ ಜಾಮೀನು/ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸತ್ರ ನ್ಯಾಯಾಲಯ ತಿರಸ್ಕರಿಸಿದೆಯೇ ವಿನಾ ವಿಶೇಷ ನ್ಯಾಯಾಲಯವಲ್ಲ. ಹೀಗಾಗಿ, ಈ ಅರ್ಜಿಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಪ್ರಶ್ನೆ ಉದ್ಭವಿಸಲ್ಲ” ಎಂದು ಹೈಕೋರ್ಟ್‌ ಹೇಳಿದೆ.

Bar & Bench

ಮಾಜಿ ಸಂಸದೆ ನಟಿ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಅಭಿಮಾನಿಗಳು ಎನ್ನಲಾದ ಐವರಿಗೆ ಜಾಮೀನು ಮತ್ತು ಒಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಕೆ ಪ್ರಮೋದ್‌, ರಾಜೇಶ್‌ ಸಿ ವೈ ಅಲಿಯಾಸ್‌ ರಾಜೇಶ್‌, ವಿಜಯ ನಗರ ಜಿಲ್ಲೆ ಕೂಡ್ಲಗಿಯ ಟಿ ಓಬಣ್ಣ, ಮೈಸೂರು ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿಯ ಚಿನ್ಮಯ್‌ ಶೆಟ್ಟಿ, ಕೊಪ್ಪಳದ ಗಂಗಾವತಿಯ ಮಂಜುನಾಥ್‌ ಅವರು ಜಾಮೀನು ಮತ್ತು ಚಿಕ್ಕಮಗಳೂರಿನ ಬಿ ಎ ವಿಕಾಸ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice Shivashankar Amarannavar

"ಎಲ್ಲಾ ಆರೋಪಿಗಳು ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಒಬ್ಬರ ಭದ್ರತೆ ಒದಗಿಸಬೇಕು. ರಮ್ಯಾ ಅಥವಾ ಇತರೆ ಸಾಕ್ಷಿಗಳನ್ನು ಆರೋಪಿಗಳು ಬೆದರಿಸುವಂತಿಲ್ಲ. ತನಿಖೆಗೆ ಸಹಕರಿಸಬೇಕು. ವಿಚಾರಣೆಯ ದಿನದಂದು ವಿನಾಯಿತಿ ದೊರೆಯದ ವಿನಾ ಎಲ್ಲರೂ ಹಾಜರಾಗಬೇಕು" ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

“ಅರ್ಜಿದಾರರ ವಿರುದ್ಧ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಮ್ಯಾ ಅವರಿಗೆ ಅಶ್ಲೀಲ ಭಾಷೆ ಬಳಕೆ ಮಾಡಿ ಬೆದರಿಕೆ ಹಾಕಿದ ಆರೋಪವಿದೆ. ಅರ್ಜಿದಾರರ ವಿರುದ್ಧ ಅನ್ವಯಿಸಿರುವ ಸೆಕ್ಷನ್‌ಗಳು ಏಳು ವರ್ಷ ಶಿಕ್ಷೆ ವಿಧಿಸುವಂಥವಲ್ಲ. ಫೋನ್‌ ಬಳಕೆ ಮಾಡಿ ಇನ್‌ಸ್ಟಾಗ್ರಾಂ ಮೂಲಕ ರಮ್ಯಾ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ಅರ್ಜಿದಾರರ ಮೊಬೈಲ್‌ಗಳನ್ನು ತನಿಖಾಧಿಕಾರಿ ಜಫ್ತಿ ಮಾಡಿದ್ದು, ಅವುಗಳನ್ನು ಎಫ್‌ಎಸ್‌ಎಲ್‌ ಪರಿಶೀಲನೆಗೆ ಕಳುಹಿಸಲಾಗಿದೆ. ಹೀಗಾಗಿ, ಅರ್ಜಿದಾರರ ಕಸ್ಟಡಿಯ ವಿಚಾರಣೆ ಅಗತ್ಯವಿಲ್ಲ. ಆರೋಪ ಪಟ್ಟಿ ಸಲ್ಲಿಕೆ ಮಾಡಿರುವುದರಿಂದ ತನಿಖೆಗೆ ಆರೋಪಿಗಳು ಅಗತ್ಯವಿಲ್ಲ. ಅರ್ಜಿದಾರರು 18-25 ವಯೋಮಾನದವರಾಗಿದ್ದು, ಜಾಮೀನು/ನಿರೀಕ್ಷಣಾ ಜಾಮೀನಿಗೆ ಆಧಾರ ತೋರಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರ ಜಾಮೀನು/ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸತ್ರ ನ್ಯಾಯಾಲಯ ತಿರಸ್ಕರಿಸಿದೆಯೇ ವಿನಾ ವಿಶೇಷ ನ್ಯಾಯಾಲಯವಲ್ಲ. ಹೀಗಾಗಿ, ಈ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರ ವಕೀಲರು “ಇನ್‌ಸ್ಟಾಗ್ರಾಂ ಮೂಲಕ ಆರೋಪಿಗಳು ಅಪರಾಧ ಕೃತ್ಯ ಎಸಗಿದ್ದು, ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇಲ್ಲ. ಬಹುತೇಕ ತನಿಖೆ ಮುಗಿದಿದ್ದು, 11ನೇ ಆರೋಪಿಯು 18 ವರ್ಷದವನಾಗಿದ್ದಾನೆ. ದೂರುದಾರೆ ರಮ್ಯಾ ಅವರು ಪ್ರಬಲರಾಗಿದ್ದು, ಅವರಿಗೆ ಅರ್ಜಿದಾರರು ಬೆದರಿಕೆ ಹಾಕಲಾಗದು. 6ನೇ ಆರೋಪಿಯು ನರ್ಸಿಂಗ್‌ ವಿದ್ಯಾರ್ಥಿಯಾಗಿದ್ದಾನೆ. ಅರ್ಜಿದಾರ/ಆರೋಪಿಗಳೆಲ್ಲರೂ ಯುವಕರಾಗಿದ್ದು, ದರ್ಶನ್‌ ಅಭಿಮಾನಿಗಳಾಗಿದ್ದಾರೆ. ಸತೇಂದರ್‌ ಕುಮಾರ್‌ ಆಂಟಿಲ್‌ ವರ್ಸಸ್‌ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆರೋಪಕ್ಕೆ ಏಳು ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆ ಇಲ್ಲದಿದ್ದರೆ ಅವರನ್ನು ಬಂಧಿಸುವಂತಿಲ್ಲ ಎಂದಿದೆ. ಪೊಲೀಸ್‌ ನೋಟಿಸ್‌ ಅನ್ವಯ ತನಿಖೆಗೆ ಹಾಜರಾದವರನ್ನು ಬಂಧಿಸುವಂತಿಲ್ಲ. ಆದರೆ, ಇಲ್ಲಿ ತನಿಖೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ” ಎಂದಿದ್ದರು.

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಬಿ ಪುಷ್ಪಲತಾ ಅವರು “ಮಾಹಿತಿದಾರೆಯೂ ಮಾಜಿ ಸಂಸದೆಯಾಗಿರುವುದರಿಂದ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ಕಳುಹಿಸಬೇಕೆ ಎಂಬ ಪ್ರಶ್ನೆ ಇದೆ. ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ರಮ್ಯಾ ಅವರಿಗೆ ಕೊಲೆ ಮತ್ತು ಅತ್ಯಾಚಾರ ಸಂದೇಶ ರವಾನಿಸಲಾಗಿದೆ. ಆರೋಪಿಗಳು ಸಾಕ್ಷಿಗಳನ್ನು ಪ್ರಭಾವಿಸುವ ಸಾಧ್ಯತೆ ಇರುವುದರಿಂದ ಅರ್ಜಿಗಳನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಟಿ ರಮ್ಯಾ ಹಂಚಿಕೊಂಡಿದ್ದರು. ಇದಕ್ಕೆ ಅನಾಮಧೇಯವಾದ 43 ಸಾಮಾಜಿಕ ಜಾಲತಾಣ ಖಾತೆಗಳಿಂದ ಅವಹೇಳನಕಾರಿ ಪ್ರತಿಕ್ರಿಯೆ ಜೊತೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು.

ಈ ಸಂಬಂಧ ರಮ್ಯಾ ನೀಡಿದ ದೂರನ್ನು ಆಧರಿಸಿ ಬೆಂಗಳೂರಿನ ಸೈಬರ್‌ ಠಾಣೆಯ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ಗಳಾದ 351(2) (ಕ್ರಿಮಿನಲ್‌ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್‌ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1)(iv) (ಲೈಂಗಿಕ ಟೀಕೆ), 79 (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67, 66(C) ಅಡಿ ಪ್ರಕರಣ ದಾಖಲಿಸಿದ್ದಾರೆ.

Pramodh K & others Vs State of Karnataka.pdf
Preview