A1
ಸುದ್ದಿಗಳು

ಆನ್‌ಲೈನ್‌ ರಮ್ಮಿ ಕೌಶಲ್ಯದಾಟವೇ ಅಥವಾ ಅವಕಾಶದಾಟವೇ? ಹೊಸದಾಗಿ ನಿರ್ಧರಿಸಲು ಆಂಧ್ರ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂ

ಆನ್‌ಲೈನ್‌ ರಮ್ಮಿಯನ್ನು ಹೇಗೆ ಆಡಲಾಗುತ್ತದೆ ಎಂಬುದರ ಕುರಿತು ವರದಿ ಸಲ್ಲಿಸಲು ಸಮಿತಿ ರಚಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Bar & Bench

ಆನ್‌ಲೈನ್ ರಮ್ಮಿ ಕೌಶಲ್ಯದ ಆಟವೇ ಅಥವಾ ಅವಕಾಶದ ಆಟವೇ ಎಂಬುದರ ಕುರಿತು ಅದಕ್ಕಾಗಿ ನೇಮಿಸಲಾದ ಸಮಿತಿ ನೀಡುವ ವರದಿ ಆಧರಿಸಿ ಹೊಸದಾಗಿ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಂಧ್ರಪ್ರದೇಶ ಹೈಕೋರ್ಟ್‌ಗೆ ಸೂಚಿಸಿದೆ [ಆಂಧ್ರ ಪ್ರದೇಶ ಮತ್ತು ಪ್ಲೇ ಗೇಮ್ಸ್ 24 ಅಂಡ್‌ 7 ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ರಮ್ಮಿ ಆಟದ ಆನ್‌ಲೈನ್ ಆವೃತ್ತಿಯಲ್ಲಿ (ಆಡಲು) ವಸ್ತು ಇಲ್ಲದಿರುವಾಗ ಆನ್‌ಲೈನ್ ರಮ್ಮಿಯನ್ನು ಹೇಗೆ ಆಡಲಾಗುತ್ತದೆ ಎಂಬ ಕುರಿತು ವರದಿ ಸಲ್ಲಿಸಲು ಸಮಿತಿ  ರಚಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಕರಣವು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠದೆದುರು ವಿಚಾರಣೆಗೆ ಬಂದಾಗ ಅದು, ಆನ್‌ಲೈನ್‌ ಗೇಮಿಂಗ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಅಧಿಸೂಚಿತ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಗಾರರಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023 ಉಂಟು ಮಾಡುವ ಪರಿಣಾಮವನ್ನೂ ಗಣನೆಗೆ ತೆಗೆದುಕೊಳ್ಳುವಂತೆ ಹೈಕೋರ್ಟ್‌ಗೆ ತಿಳಿಸಿತು.

ಒಂದು ವೇಳೆ ಪ್ರತಿವಾದಿ ಗೇಮಿಂಗ್ ಕಂಪನಿಗಳು ಸಲ್ಲಿಸಿದ ರಿಟ್ ಅರ್ಜಿಗಳನ್ನು ಹೈಕೋರ್ಟ್‌ ಪುರಸ್ಕರಿಸಿ ಆದೇಶ ನೀಡಿದರೆ, ಆ ಆದೇಶವನ್ನು ಮೂರು ವಾರಗಳ ಅವಧಿಗೆ ತಡೆ ನೀಡಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

ಈ ವರ್ಷದ ಜನವರಿ 31ರಂದು, ಆಂಧ್ರಪ್ರದೇಶ ಗೇಮಿಂಗ್ ಕಾಯಿದೆ- 1974ರ ನಿಯಮಾವಳಿಗೆ ಮಾಡಲಾದ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು.

ಆನ್‌ಲೈನ್ ರಮ್ಮಿ ಕೌಶಲ್ಯದ ಆಟವಾಗಿದ್ದರೂ, ಕಾಯಿದೆಯ ವ್ಯಾಪ್ತಿಯಿಂದ ಅದಕ್ಕೆ ವಿನಾಯಿತಿ ಇದ್ದರೂ, 1974 ರ ಕಾಯಿದೆಯ ಸೆಕ್ಷನ್ 15ಕ್ಕೆ ಮಾಡಿದ ತಿದ್ದುಪಡಿಗಳಿಂದಾಗಿ ಆ ಕೌಶಲ್ಯದ ಆಟಕ್ಕೆ ಈಗ ದಂಡ ವಿಧಿಸಲಾಗುತ್ತಿದೆ ಎಂದು ವಿವಿಧ ಗೇಮಿಂಗ್ ವೇದಿಕೆಗಳು ದೂರಿದ್ದವು.

ರಮ್ಮಿ ಐಹಿಕ ವಸ್ತುಗಳನ್ನು ಬಳಸಿ ಆಡುವ ಕೌಶಲ್ಯದ ಆಟ ಎಂದು ಅನೇಕ ತೀರ್ಪುಗಳು ಹೇಳಿದ್ದರೂ ಆನ್‌ಲೈನ್‌ ರಮ್ಮಿ ಕೌಶಲ್ಯದ ಆಟವೇ ಅಥವಾ ಅವಕಾಶದ ಆಟವೇ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅದನ್ನು ಹೇಗೆ ಆಡಲಾಗುತ್ತದೆ ಮತ್ತು ಆಯೋಜಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿಯದೆ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ ಎಂದು ಹೈಕೋರ್ಟ್‌ ಹೇಳಿತ್ತು.

ಹೀಗಾಗಿ ಈ ಬಗೆಯ ಅಂಶಗಳನ್ನು ಪರಿಶೀಲಿಸಲು ನ್ಯಾಯಾಂಗ, ತಾಂತ್ರಿಕ ಮತ್ತು ತಾಂತ್ರಿಕೇತರ ಸದಸ್ಯರು, ಪೊಲೀಸ್‌ ಅಧಿಕಾರಿ ಹಾಗೂ ಸರ್ಕಾರಿ ಪ್ರತಿನಿಧಿಯೊಬ್ಬರನ್ನು ಒಳಗೊಂಡ ಸಮಿತಿ ರಚಿಸುವಂತೆ ಆದೇಶಿಸಿತ್ತು.

ಕೌಶಲ್ಯದಾಟ, ಅವಕಾಶದಾಟದ ನಡುವಿನ ವ್ಯತ್ಯಾಸ: ಕೌಶಲ್ಯದಾಟದಲ್ಲಿ ಯಶಸ್ಸು ಎಂಬುದು ಪ್ರತಿ ವ್ಯಕ್ತಿಯ ವಿಶಿಷ್ಟ ಕೌಶಲ್ಯಗಳಿಂದ ನಿರ್ಧರಿತವಾಗುತ್ತದೆ. ಇಂತಹ ಆಟಗಳಿಗೆ ಕೇರಂ, ಬಿಲಿಯರ್ಡ್ಸ್‌, ಚದುರಂಗದಂತಹ ಆಟಗಳು ಉದಾಹರಣೆಗಳು. ಆದರೆ ಅವಕಾಶದ ಆಟದಲ್ಲಿ ಕೌಶಲ್ಯವನ್ನು ಬಳಸಲಾಗುತ್ತದೆಯಾದರೂ ಗೆಲುವು ಹೆಚ್ಚಾಗಿ ಅವಕಾಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಇಸ್ಪೀಟ್‌ , ಪಗಡೆಯಾಟ, ಜೂಜು, ರೌಲೆಟ್‌ ಇತ್ಯಾದಿ.