Justices MR Shah and CT Ravikumar 
ಸುದ್ದಿಗಳು

ಇಲಾಖಾ ಸ್ಪರ್ಧಾ ಪರೀಕ್ಷೆ ಮೂಲಕ ಉನ್ನತ ನ್ಯಾಯಾಂಗದಲ್ಲಿ ಶೇ.10ರಷ್ಟು ಸೀಟು ಮಾತ್ರ ಭರ್ತಿ ಮಾಡಬಹುದು: ಸುಪ್ರೀಂ

ಜನವರಿ 1, 2011ರಿಂದ ಜಾರಿಗೆ ಬರುವಂತೆ ಅಸ್ತಿತ್ವದಲ್ಲಿರುವ ಸೇವಾ ನಿಯಮಗಳನ್ನು ಧನಾತ್ಮಕವಾಗಿ ತಿದ್ದುಪಡಿ ಮಾಡಲು ಎಲ್ಲಾ ಹೈಕೋರ್ಟ್‌ಗಳು ಕ್ರಮ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು.

Bar & Bench

ಉನ್ನತ ನ್ಯಾಯಾಲಯಗಳ ಹುದ್ದೆ ಭರ್ತಿ ಮಾಡುವಾಗ ಹೈಕೋರ್ಟ್‌ಗಳು ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶೇ 10ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ರಾಜೇಂದ್ರ ಕುಮಾರ್ ಶ್ರೀವಾಸ್ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

2011 ರ ಜನವರಿ 1 ರ ನಂತರದ ಯಾವುದೇ ನೇಮಕಾತಿಯಲ್ಲಿ ಶೇಕಡಾ 10ರಷ್ಟು ಕೋಟಾವನ್ನು ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸಬೇಕು ಮತ್ತು ಮುಂದಿನ ನೇಮಕಾತಿಯಲ್ಲಿ ಅಂತಹ ಹುದ್ದೆಗಳನ್ನು ಸರಿಹೊಂದಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ವಿಭಾಗೀಯ ಪೀಠ ಹೈಕೋರ್ಟ್‌ಗೆ ಸೂಚಿಸಿತು. 

ಉನ್ನತ ನ್ಯಾಯಾಲಯಗಳ ಹುದ್ದೆ ಭರ್ತಿ ಮಾಡುವಾಗ ಹೈಕೋರ್ಟ್‌ಗಳು ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶೇ 10ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡವಂತೆ ಅಖಿಲ ಭಾರತ ನ್ಯಾಯಾಧೀಶರ ಸಂಘದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದರೂ ಮಧ್ಯಪ್ರದೇಶ ಹೈಕೋರ್ಟ್‌ ಆ ಮಿತಿಯನ್ನು ಮೀರಿ ಶೇ 10ಕ್ಕಿಂತ ಹೆಚ್ಚು ಸೀಟುಗಳನ್ನು ಭರ್ತಿ ಮಾಡಿದೆ ಎಂದು ದೂರಿ ಅದೇ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

ಅಲ್ಲದೆ 2011ರ ಜನವರಿ 1ರಿಂದ ಜಾರಿಗೆ ಬರುವಂತೆ ಅಸ್ತಿತ್ವದಲ್ಲಿರುವ ಸೇವಾ ನಿಯಮಗಳನ್ನು ಧನಾತ್ಮಕವಾಗಿ ತಿದ್ದುಪಡಿ ಮಾಡುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ಸೂಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದಿಷ್ಟ ನಿರ್ದೇಶನ ನೀಡಿದ್ದರೂ ಕೂಡ, ಮಧ್ಯಪ್ರದೇಶ ಹೈಕೋರ್ಟ್ ಶೇ 10ರಷ್ಟು ಸೀಟುಗಳನ್ನು ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡುವ ನಿಯಮಾವಳಿಗೆ ತಿದ್ದುಪಡಿ ಮಾಡಲಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ ಮಧ್ಯಪ್ರದೇಶ ಹೈಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.