ಸಂವಿಧಾನಕ್ಕೆ 342 ಎ ವಿಧಿ ಸೇರ್ಪಡೆ ಮಾಡಿದ ನಂತರ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವನ್ನು (ಎಸ್‌ಇಬಿಸಿ) ಗುರುತಿಸಲು ಮತ್ತು 342 ಎ (1) ವಿಧಿಯಡಿ ಪ್ರಕಟಿಸಬೇಕಾದ ಮೀಸಲಾತಿ ಪಟ್ಟಿಗೆ ಸೇರಿಸಲು ಅಧಿಕಾರವಿರುವುದು ಕೇಂದ್ರಕ್ಕೆ ಮಾತ್ರ ಎಂದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. (ಡಾ. ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ನಡುವಣ ಪ್ರಕರಣ).
ಎಸ್‌ಇಬಿಸಿಗಳ ಪಟ್ಟಿಗೆ ಜಾತಿ ಅಥವಾ ಸಮುದಾಯಗಳನ್ನು ಸೇರಿಸಲು, ಹೊರಗಿಡಲು ಇಲ್ಲವೇ ಮಾರ್ಪಾಡು ಮಾಡಲು ರಾಜ್ಯಗಳು ಸಂವಿಧಾನದ 338 ಬಿ ವಿಧಿಯಡಿ ರಾಷ್ಟ್ರಪತಿ ಅಥವಾ ಆಯೋಗಕ್ಕೆ ಸಲಹೆಗಳನ್ನು ಮಾತ್ರ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನಕ್ಕೆ 102 ನೇ ತಿದ್ದುಪಡಿ ಮೂಲಕ 366 (26 ಸಿ) ಮತ್ತು 342 ಎ ವಿಧಿಗಳನ್ನು ಸೇರಿಸಿದ ಮೇಲೆ ರಾಷ್ಟ್ರಪತಿಯವರಿಗೆ ಮಾತ್ರ ಎಸ್‌ಇಬಿಸಿ ಗುರುತಿಸಲು ಮತ್ತು ಅವುಗಳನ್ನು 342 ಎ (1) ವಿಧಿಯಡಿ ಮೀಸಲಾತಿಗಾಗಿ ಪ್ರಕಟಿಸಬೇಕಾದ ಪಟ್ಟಿಗೆ ಸೇರಿಸಲು ಅಧಿಕಾರವಿದೆ, ಬೇರಾವುದೇ ಸಂಸ್ಥೆಗಳಿಗೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ಸಾಂವಿಧಾನಿಕ ಪೀಠ 3: 2 ರಷ್ಟು ಬಹುಮತದಿಂದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ರಾವ್, ಗುಪ್ತಾ ಮತ್ತು ಭಟ್ ಈ ಪ್ರಸ್ತಾಪವನ್ನು ಬೆಂಬಲಿಸಿದರೆ, ನ್ಯಾಯಮೂರ್ತಿಗಳಾದ ಭೂಷಣ್ ಮತ್ತು ನಜೀರ್ ಇದಕ್ಕೆ ಭಿನ್ನಮತ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ವಿಸ್ತರಿಸಿದ 2018ರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ (ಎಸ್‌ಬಿಸಿ) ಕಾಯಿದೆಯನ್ನು ರದ್ದುಪಡಿಸುವ ಸುಪ್ರೀಂಕೋರ್ಟ್ ತೀರ್ಪಿನ ಭಾಗವಾಗಿ ಈ ನಿರ್ಣಾಯಕ ತೀರ್ಮಾನ ಹೊರಬಿದ್ದಿದೆ.