Justice M Dhandapani, Madras High Court  
ಸುದ್ದಿಗಳು

ಎಂಸಿಐ ಅಥವಾ ಆಯುಷ್ ಇಲಾಖೆ ಶಿಫಾರಸು ಇರುವ ನೋಂದಾಯಿತ ವೈದ್ಯರು ಮಾತ್ರ ಕ್ಲಿನಿಕ್ ನಡೆಸಬಹುದು: ಮದ್ರಾಸ್ ಹೈಕೋರ್ಟ್

ಸಮುದಾಯ ವೈದ್ಯಕೀಯ ಸೇವೆಯಲ್ಲಿ ಡಿಪ್ಲೊಮಾ ಪದವಿ ಆಧರಿಸಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯ ನಡೆಸುತ್ತಿರುವ ಅರ್ಜಿದಾರರಿಗೆ ಪರಿಹಾರ ನೀಡಲು ನ್ಯಾ. ಎಂ ದಂಡಪಾಣಿ ನಿರಾಕರಿಸಿದರು.

Bar & Bench

ನೋಂದಾಯಿತ ವೈದ್ಯಕೀಯ ವೃತ್ತಿಗಾರರು ಮತ್ತು ಭಾರತೀಯ ವೈದ್ಯಕೀಯ ಮಂಡಳಿ (MCI) ಅಥವಾ ಕೇಂದ್ರ ಸರ್ಕಾರದ ಆಯುಷ್ ಇಲಾಖೆ  ಶಿಫಾರಸು ಮಾಡಿರುವ ವ್ಯಕ್ತಿಗಳು ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳು ಅಥವಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ನಡೆಸಬಹುದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕೆ. ಗಣೇಶನ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].

ಎಂಸಿಐನಿಂದ ಮಾನ್ಯತೆ ಪಡೆದ ವೈದ್ಯರು, ನೋಂದಾಯಿತ ವೈದ್ಯಕೀಯ ವೈದ್ಯರು ಮಾತ್ರ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಒದಗಿಸಲು ಅರ್ಹರಾಗಿರುತ್ತಾರೆ ಎಂದು ಮಾರ್ಚ್ 31ರಂದು ನೀಡಿದ ತೀರ್ಪಿನಲ್ಲಿ  ನ್ಯಾ. ಎಂ ದಂಡಪಾಣಿ ಹೇಳಿದ್ದಾರೆ.

"ಅರ್ಜಿದಾರರು ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಿ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯ  ನಡೆಸಲು ತಾನು ಅರ್ಹ ಎಂಬುದಾಗಿ  ಹೇಳಿಕೊಳ್ಳುತ್ತಾರೆ. ಆದರೆ ನಿಯಮಾವಳಿ ಪ್ರಕಾರ ನೋಂದಾಯಿತ ವೈದ್ಯರು ಎಂದರೆ ಒಬ್ಬ ವ್ಯಕ್ತಿಯು ಸರ್ಕಾರದಿಂದ ವೈದ್ಯಕೀಯ ಅರ್ಹತೆ ಪಡೆದಿರಬೇಕು ಮತ್ತು ವೈದ್ಯಕೀಯ, ದಂತ ವೈದ್ಯಕೀಯ, ಸಿದ್ಧ, ಆಯುರ್ವೇದ, ಯುನಾನಿ ಅಥವಾ ಹೋಮಿಯೋಪತಿ ಕೌನ್ಸಿಲ್‌ಗಳು ಅಥವಾ ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಅಂತಹ ಯಾವುದೇ ಕೌನ್ಸಿಲ್, ಮಂಡಳಿ ಅಥವಾ ತಮಿಳುನಾಡು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಸನಬದ್ಧ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡವರಾಗಿರಬೇಕು. ವೈದ್ಯ ಎಂಬುದು ಅಲೋಪತಿ ಅಥವಾ ಆಯುಷ್ ಅಡಿಯಲ್ಲಿ ಸಮಾಲೋಚನೆ ಅಥವಾ ಚಿಕಿತ್ಸೆ ನೀಡುವ ನೋಂದಾಯಿತ ವೈದ್ಯ ಎಂಬ ಅರ್ಥವನ್ನುಒಳಗೊಂಡಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ತಮಿಳುನಾಡಿನ ಗ್ರಾಮಾಂತರ ಪ್ರದೇಶದಲ್ಲಿ  ತನ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಡೆಸಲು ಅವಕಾಶ ನೀಡಲು ತಮಿಳುನಾಡು ಸರ್ಕಾರ ಮತ್ತು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಕೆ ಗಣೇಶನ್ ಎಂಬುವವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

"ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಆಯುಷ್ ಇಲಾಖೆಯ ಶಿಫಾರಸು ಇಲ್ಲದೆ ಅರ್ಜಿದಾರರು ತಮಿಳುನಾಡಿನಲ್ಲಿ ಎಲ್ಲಿಯೂ ಕ್ಲಿನಿಕ್ ನಡೆಸಲು ಅರ್ಹರಾಗಿರುವುದಿಲ್ಲ" ಎಂದುನ್ಯಾಯಾಲಯ ಒತ್ತಿ ಹೇಳಿತು.