Rashtrapati Bhavan, President 
ಸುದ್ದಿಗಳು

ಸುಪ್ರೀಂನಿಂದ ಮಾತ್ರ ರಾಷ್ಟ್ರಪತಿ ಚುನಾವಣೆ ವಿವಾದದ ಕುರಿತ ಮನವಿ ವಿಚಾರಣೆ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ನ್ಯಾಯಮೂರ್ತಿ ಸಂಜೀವ್‌ ನರುಲಾ ಹೇಳಿದ್ದಾರೆ.

Bar & Bench

ಜೈಲುಪಾಲಾಗಿರುವ ಜನಪ್ರತಿನಿಧಿಗಳನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಂತೆ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ದೆಹಲಿ ಹೈಕೋರ್ಟ್‌ ವಜಾ ಮಾಡಿದೆ.

ರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ನ್ಯಾಯಮೂರ್ತಿ ಸಂಜೀವ್‌ ನರುಲಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿತು.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸದ ಫಲಿತಾಂಶ ಪ್ರಕಟಿಸಿದ ಬಳಿಕ ಚುನಾವಣಾ ಮನವಿಯ ಮೂಲಕ ಪರಿಹಾರ ಕೋರಬಹುದು ಎಂದು ಸಂವಿಧಾನದ 71(1) ವಿಧಿ ಮತ್ತು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆ 1952ರಲ್ಲಿ ಸ್ಪಷ್ಟಪಡಿಸಲಾಗಿದ್ದು, ಇಂಥ ಮನವಿಗಳು ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಮಾತ್ರವೇ ಒಳಪಟ್ಟಿವೆ ಎಂದು ಪೀಠ ಹೇಳಿದೆ.

ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಅನುಮಾನ ಅಥವಾ ವಿವಾದಗಳಿಗೆ ಸಂಬಂಧಿಸಿದ ವಿಚಾರಣೆ ಅಥವಾ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಮಾತ್ರ ಮಾಡಬಹುದಾಗಿದೆ. ಹೀಗಾಗಿ, ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಬಂಧನಕ್ಕೆ ಒಳಗಾಗಿರುವ ಶಾಸಕರು ಮತ್ತು ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ ನಿರ್ಬಂಧಿಸಲು ಆದೇಶಿಸಿಬೇಕು ಎಂದು 70 ವರ್ಷದ ಬಡಗಿ ಸತ್ವೀರ್‌ ಸಿಂಗ್‌ ಅವರು ಮನವಿ ಮಾಡಿದ್ದರು. ತಾನೂ ಸಹ ರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.