ತನ್ನ ಯಾವುದೇ ಪೀಠದೆದುರು ಹಾಜರಾಗುವ ವಕೀಲರು ಕಪ್ಪು ಗೌನ್ ಧರಿಸಿರಬೇಕು ಎಂದು ನಿರ್ದೇಶಿಸಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ ಎನ್‌ಸಿಎಲ್‌ಟಿ ರಿಜಿಸ್ಟ್ರಾರ್ ಅವರು 2017ರಲ್ಲಿ ಹೊರಡಿಸಿದ್ದ ಆಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿತು [ಆರ್ ರಾಜೇಶ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಎನ್‌ಸಿಎಲ್‌ಟಿ ಅಧಿಸೂಚನೆಗೆ ಅಧಿಕಾರ ವ್ಯಾಪ್ತಿ ಇಲ್ಲ ಮತ್ತು ಅದಕ್ಕೆ ಕಾನೂನಿನಲ್ಲಿ ಯಾವುದೇ ಆಧಾರ ಇಲ್ಲ ಎಂದು ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ಪೀಠ ತಿಳಿಸಿತು.
ವಕೀಲರ ಕಾಯಿದೆ ಮತ್ತು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳು ನ್ಯಾಯವಾದಿಗಳಿಗೆ ವಸ್ತ್ರ ಸಂಹಿತೆ ವಿಧಿಸುವ ಅಧಿಕಾರವನ್ನು ಕೇವಲ ಉಚ್ಚ ನ್ಯಾಯಾಲಯಗಳಿಗೆ ನೀಡಿವೆ ಎಂದು ಪೀಠ ಹೇಳಿತು. ಅಲ್ಲದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಮುಂದೆ ಹಾಜರಾಗುವಾಗ ಮಾತ್ರ ವಕೀಲರು ತಮ್ಮ ಕಪ್ಪು ಗೌನ್‌ಗಳನ್ನು ಕಡ್ಡಾಯವಾಗಿ ಧರಿಸಬೇಕೆ ವಿನಾ ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದೆ ಅಲ್ಲ ಎಂದು ಅದು ನುಡಿಯಿತು.
“ವಕೀಲರ ಕಾಯಿದೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಸೆಕ್ಷನ್ 34ರ ಸಹವಾಚನದಿಂದ ತಿಳಿದುಬರುವುದೇನೆಂದರೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದೆ ಹಾಜರಾಗುವ ವಕೀಲರ ವಸ್ತ್ರಸಂಹಿತೆಗೆ ಹೈಕೋರ್ಟ್‌ಗಳು ಮಾತ್ರ ನಿಯಮ ರೂಪಿಸಬಹುದಾಗಿದ್ದು ಈ ನಿಯಮಗಳು ಚಾಲ್ತಿಯಲ್ಲಿಲ್ಲದಿದ್ದಾಗ ಭಾರತೀಯ ವಕೀಲರ ಪರಿಷತ್ತಿನ ನಿಯಮಾವಳಿ ಅಧ್ಯಾಯ IVರಲ್ಲಿನ ನಿಯಮಗಳು ಜಾರಿಯಲ್ಲಿರುತ್ತವೆ. ತನ್ನ ಮುಂದೆ ಹಾಜರಾಗುವ ವಕೀಲರ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ನೀಡುವ ಅಧಿಕಾರ ನ್ಯಾಯಮಂಡಳಿಗಳಿಗೆ ಇಲ್ಲ” ಎಂದು ಅದು ವಿವರಿಸಿತು.
ಖುದ್ದು ಕಕ್ಷಿದಾರರಾಗಿ ಹಾಜರಿದ್ದ ವಕೀಲ ಆರ್ ರಾಜೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ವಕೀಲರಿಗೆ ವಸ್ತ್ರ ಸಂಹಿತೆ ವಿಧಿಸಲು ರಿಜಿಸ್ಟ್ರಾರ್‌ಗೆ ಯಾವುದೇ ಅಧಿಕಾರ ಇಲ್ಲ. ಸುತ್ತೋಲೆ ಅಧಿಕಾರ ವ್ಯಾಪ್ತಿ ಮೀರಿದ್ದು ಅರ್ಥಹೀನ ಹಾಗೂ ಅನೂರ್ಜಿತವಾದುದಾಗಿದೆ. ಕಾನೂನುಬಾಹಿರವಾದ, ಸ್ವೇಚ್ಛೆಯಿಂದ ಕೂಡಿರುವ ಹಾಗೂ ಯಾವುದೇ ಅರ್ಹತೆ ಇಲ್ಲದ ಇದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಅವರು ಒತ್ತಾಯಿಸಿದ್ದರು.