ಕಾನೂನು ಮತ್ತು ನೀತಿ ನಿರೂಪಣೆಯ ವಿಚಾರಗಳು ಸಾರ್ವಜನಿಕ ಮತ್ತು ಖಾಸಗಿ ಸ್ಥಳ ಎಂಬ ದ್ವಂದ್ವನ್ನು ಮೀರಿ ಅಧಿಕಾರದ ಅಸಮತೋಲನವನ್ನು ಗ್ರಹಿಸಬೇಕಿದೆ. ಹೀಗೆ ಮಾಡುವ ಮೂಲಕ ಸಮಾನತೆ ಕೇವಲ ಘೋಷಣೆಯಲ್ಲ ಬದಲಿಗೆ ಎಲ್ಲರ ಪಾಲಿನ ಜೀವಂತ ಸತ್ಯ ಎಂಬಂತಹ ಸಮಾಜ ನಿರ್ಮಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಕರೆ ನೀಡಿದರು.
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾ. ಇ ಎಸ್ ವೆಂಕಟರಾಮಯ್ಯ ಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಗಲಾಟೆಯ ಮೂಲಕ ಸಾರ್ವಜನಿಕ ಶಾಂತಿ ಕದಡಿದರೆ ಅದನ್ನು ಅಪರಾಧ ಎನ್ನಲಾಗುತ್ತದೆ. ಗಲಾಟೆ ನಡೆದ ಜಾಗ ಸಾರ್ವಜನಿಕ ಸ್ಥಳವಾಗಿದ್ದರೆ ಮಾತ್ರ ಶಿಕ್ಷೆಯಾಗುತ್ತದೆ, ಇಲ್ಲದಿದ್ದರೆ ಇಲ್ಲ. ಹೀಗಾಗಿ ಸಾರ್ವಜನಿಕ ಮತ್ತು ಖಾಸಗಿ ಎಂಬ ಭೇದವನ್ನು ಮೀರಿ ಸಮಗ್ರ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಘಟನೆಯನ್ನು ಕಾಣಲು ಸಿದ್ಧವಿರಬೇಕು ಎಂದರು.
ಸಾರ್ವಜನಿಕ ಮತ್ತು ಖಾಸಗಿ ಸ್ಥಳ ಎಂಬ ಕುರಿತಾದ ದ್ವಂದ್ವ ಹಲವಾರು ವರ್ಷಗಳಿಂದ ನಮ್ಮ ಕಾನೂನುಗಳ ಸ್ತ್ರೀವಾದಿ ಮತ್ತು ಆರ್ಥಿಕ ಟೀಕೆಗಳಿಗೆ ಆಧಾರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ನಿಜವಾಗಿಯೂ ಅಸ್ತಿತ್ವದಲ್ಲಿರಬೇಕಾದರೆ ಅದು ಈ ಎರಡೂ ಸ್ಥಳಗಳಲ್ಲಿ ಇರಬೇಕು. ಈ ಎರಡೂ ಸ್ಥಳಗಳು ಹೆಚ್ಚಾಗಿ ಪರಸ್ಪರ ಅತಿಕ್ರಮಿಸಿಕೊಂಡಿದ್ದು ಹೀಗಾಗಿ ಭೇದ ಮೀರಿ ನೋಡುವ ಅಗತ್ಯವಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳದಲ್ಲಿ ಅಪರಾಧ ನಡೆದಿದೆಯೇ ಇಲ್ಲವೆ ಖಾಸಗಿ ಸ್ಥಳದಲ್ಲಿ ನಡೆದಿದೆಯೇ ಎಂಬುದನ್ನು ಲೆಕ್ಕಿಸದೆ ತುಳಿತಕ್ಕೊಳಗಾದವರು ಮತ್ತು ದಬ್ಬಾಳಿಕೆಗೆ ತುತ್ತಾದವರನ್ನು ಗುರುತಿಸುವ ಕಾರ್ಯ ನಡೆಯಬೇಕು. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಶೋಷಣೆಗೆ ತುತ್ತಾದವರನ್ನು ರಕ್ಷಿಸಲು ಕಾನೂನಿನ ಗುರಿಯನ್ನು ವಿಸ್ತರಿಸಬೇಕು ಎಂದು ಅವರು ಕರೆ ನೀಡಿದರು.
ಖಾಸಗಿ ಕ್ಷೇತ್ರ ಎಂದು ಕರೆಸಿಕೊಳ್ಳುವ ಮನೆಗೆಲಸವು ಸಂಭಾವನೆ ಪಡೆಯದ ಗೃಹಿಣಿಯ ಆರ್ಥಿಕ ಚಟುವಟಿಕೆಯಾಗಿದೆ. ಅಂತೆಯೇ ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರು ಲಿಂಗಾಧಾರಿತ ಉದ್ಯೋಗಗಳಿಗೆ ಸೀಮಿತವಾಗಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಹೀಗೆ ಎರಡೂ ಕಡೆಯೂ ಅವರಿಗೆ ಹಕ್ಕುಗಳಿದ್ದು ಅವುಗಳ ಉಲ್ಲಂಘನೆಯಾಗುತ್ತಿರುತ್ತದೆ ಎಂದರು.
“ಮನೆ ಎಂಬುದು ಕೆಲವರಿಗೆ ಅಸಮಾನತೆಯ ತಾಣವಾಗಿರಬಹುದು. ಗಂಡು ಅಥವಾ ಹೆಣ್ಣು ಮಗುವಿಗೆ ಶಿಕ್ಷಣ ನೀಡಲು ಆರ್ಥಿಕ ಸಮಸ್ಯೆ ಎದುರಾದರೆ ಆಗ ಕುಟುಂಬ ವಿದ್ಯೆ ಕೊಡಿಸಲು ಗಂಡನ್ನು ಆಯ್ಕೆ ಮಾಡಿಕೊಳ್ಳುತ್ತದೆಯೇ ವಿನಾ ಹೆಣ್ಣನಲ್ಲ ಎಂದು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ” ಎಂದು ಹೇಳಿದರು.
“ಇಂತಹ ಸಂಗತಿಗಳು ವೃತ್ತಿಪರ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅಡೆತಡೆ ಸೃಷ್ಟಿಸಲಿದ್ದು ಮಹಿಳೆಯರ ಮೇಲ್ಮುಖವಾದ ಚಲನಶೀಲತೆಯನ್ನು ತಡೆಯುತ್ತದೆ.. ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾ ಭಾಯಿ ಬಾಲ್ಯವಿವಾಹಗಳನ್ನು ಎದುರಿಸಿದ್ದರು. ಅವರ ಪ್ರಯತ್ನಗಳಿಂದಾಗಿ ಸಮ್ಮತಿಯ ವಯಸ್ಸಿನ ಕುರಿತಾದ ಕಾಯಿದೆ ರೂಪುಗೊಂಡಿತು” ಎಂದು ಸ್ಮರಿಸಿದರು.
ಕಾನೂನು ಮಧ್ಯಸ್ಥಿಕೆ ಹೊರತಾಗಿಯೂ ತಾರತಮ್ಯ ಮುಂದುವರೆಯುತ್ತಿದೆ. ಕೆಲಸದ ಸ್ಥಳದ ತಾರತಮ್ಯ ಸಮಾನತೆಯನ್ನು ದುರ್ಬಲಗೊಳಿಸುವುದನ್ನು ಮುಂದುವರೆಸುತ್ತಾ ಹೋಗುತ್ತದೆ. ಲಿಂಗಾಧಾರಿತ ವೇತನದ ತಾರತಮ್ಯ ಮಹಿಳೆಯರಿಗೆ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ವಾಸ್ತವವಾಗಿದ್ದು ಸಮಾನತೆಯ ಮೂಲಕ ಹೆಚ್ಚಿನ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ನುಡಿದರು.
ಇದೇ ವೇಳೆ ಅವರು “ವಿಕಲಚೇತನರ ಕುರಿತಾದ ಸಮಂಜಸ ನೀತಿ ಕಾಣೆಯಾಗಿರಬಹುದು. ಅವಕಾಶ ನೀಡಿದ ನಂತರವೂ ಅವರ ಅರ್ಹತೆ ಪ್ರಶ್ನಿಸಲಾಗುತ್ತದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಅತಿ ಹೆಚ್ಚು ವಿಕಲಚೇತನ ವ್ಯಕ್ತಿಗಳು ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಇ- ಸಮಿತಿ ಗಮನಿಸಿರುವಂತೆ ಐಸಿಟಿ ಪರಿಕರಗಳು ವಿಕಲಚೇತನರಿಗೆ ಮಹತ್ವದ್ದಾಗಿ ಪರಿಣಮಿಸಲಿವೆ” ಎಂದರು.
ವಿಕಲಚೇತನರು ನ್ಯಾಯಪಡೆಯಲು ಪೂರಕವಾದ ಸುಪ್ರೀಂ ಕೋರ್ಟ್ ಯೋಜನೆಗಳನ್ನು ವಿವರಿಸಿದರು. ಶ್ರವಣ ದೋಷವಿರುವ ವಕೀಲೆ ಸಾರಾ ಸನ್ನಿ ಅವರು ಸಂಜ್ಞಾ ವ್ಯಾಖ್ಯಾನಕಾರರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದನ್ನು ಅವರು ಪ್ರಸ್ತಾಪಿಸಿದರು.
“ಭಾರತದಲ್ಲಿ ವಸತಿ ತಾರತಮ್ಯ (ದಲಿತರಿಗೆ ಮತ್ತು ಮುಸ್ಲಿಮರಿಗೆ ಮನೆ ಬಾಡಿಗೆಗೆ ನೀಡಬಾರದೆಂಬ ಕಲ್ಪನೆ) ಗಮನಿಸಿದರೆ… ಕೇರಳದ ವತ್ತವಾಡದಲ್ಲಿ ದಲಿತರಿಗೆ ಕ್ಷೌರದಂಗಡಿ ಪ್ರವೇಶ ನಿರಾಕರಿಸಲಾಗಿದೆ. ಅವರಿಗೆ ನೀರು ಕೂಡ ನೀಡಿಲ್ಲ. ಅಂಬೇಡ್ಕರ್ ಅವರು ಜಾತಿಯ ಚಲನಶೀಲತೆ ಜೊತೆಗೆ ನೀರಿನ ಪಾತ್ರವನ್ನು ಗುರುತಿಸಿದ್ದರು” ಎಂದು ತಿಳಿಸಿದರು.
ನ್ಯಾ. ಇ ಎಸ್ ವೆಂಕಟರಾಮಯ್ಯ ಅವರ ಕೊಡುಗೆಗಳನ್ನು ಇದೇ ಸಂದರ್ಭದಲ್ಲಿ ಅವರು ಸ್ಮರಿಸಿದರು. “ಕೆಲಕಾಲ ಶಿಕ್ಷಕರಾಗಿದ್ದ ನ್ಯಾ. ಇಎಸ್‌ವಿ ಅವರು ಅವರು ಎಸ್‌ಪಿ ಗುಪ್ತ ಪ್ರಕರಣದಲ್ಲಿ ನ್ಯಾಯಾಂಗ ಸ್ವಾತಂತ್ರ್ಯದ ಉಗ್ರ ರಕ್ಷಕರೆನಿಸಿಕೊಂಡರು. ಜೊತೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕರಣದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಟಿಬದ್ಧರಾದರು. ಚರ್ಮೋದ್ಯಮದಿಂದ ಗಂಗಾ ನದಿಯನ್ನು ಮಲಿನಗೊಳ್ಳಲಿದ್ದು ಪರಿಸರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದಿದ್ದರು. ಅವರು ತಮ್ಮ ಕಾಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಚಿಂತಿಸುತ್ತಿದ್ದರು” ಎಂದು ಶ್ಲಾಘಿಸಿದರು.
ನ್ಯಾ. ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಸ್ವಾಗತಿಸಿದರು. ಆಂಧ್ರಪ್ರದೇಶದ ರಾಜ್ಯಪಾಲರು ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್, ನ್ಯಾ. ಹೃಷಿಕೇಶ್ ರಾಯ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರವೀಂದ್ರ ಭಟ್, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.