Senior Advocate Kapil Sibal 
ಸುದ್ದಿಗಳು

ವಿಚಾರಣಾ ನ್ಯಾಯಾಧೀಶರ ಮಧ್ಯಪ್ರವೇಶಕ್ಕೆ ಅವಕಾಶ ನೀಡದ ಪಿಎಂಎಲ್ಎ; ಉನ್ನತ ನ್ಯಾಯಾಂಗ ಸಕ್ರಿಯವಾಗಲಿ: ಕಪಿಲ್ ಸಿಬಲ್

ಭಾರತೀಯ ನ್ಯಾಯ ಸಂಹಿತೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಭಾರತೀಯ ಕ್ರಿಮಿನಲ್ ಕಾನೂನನ್ನು ಪರಿಷ್ಕರಿಸುವ ಅಗತ್ಯವಿದೆ ಎಂದಿದ್ದಾರೆ ಅವರು.

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ರೀತಿಯ "ದಬ್ಬಾಳಿಕೆಯ" ಕಾನೂನುಗಳು ನ್ಯಾಯಾಂಗ ಮಧ್ಯಪ್ರವೇಶಕ್ಕೆ ಬಹಳ ಕಡಿಮೆ ಅವಕಾಶ ನೀಡುತ್ತವೆ. ಆ ಮೂಲಕ ಭಾರತದ ನ್ಯಾಯಿಕ ಪೂರ್ವನಿದರ್ಶನಗಳ (ಭವಿಷ್ಯದ ತೀರ್ಪುಗಳಿಗೆ ನ್ಯಾಯಿಕ ತತ್ವವನ್ನು ಒದಗಿಸುವಂತಹ ಹಿಂದಿನ ತೀರ್ಪುಗಳು) ಮೌಲ್ಯಗಳನ್ನು ಕೆಳಗಿಳಿಸಿವೆ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಆತಂಕ ವ್ಯಕ್ತಪಡಿಸಿದರು.

ಸಿಕ್ಕಿಂ ನ್ಯಾಯಾಂಗ ಅಕಾಡೆಮಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ಸಿಬಲ್‌ ಈ ವಿಚಾರ ತಿಳಿಸಿದರು.

ಸಿಬಲ್‌ ಅವರ ಭಾಷಣದ ಪ್ರಮುಖಾಂಶಗಳು

  • ನ್ಯಾಯಿಕ ಪೂರ್ವನಿದರ್ಶನವಾದಂತಹ ತೀರ್ಪುಗಳಿಗೆ ಮೌಲ್ಯವಿಲ್ಲವಾಗಿದೆ. ಕಾನೂನುಗಳು ಕಠಿಣವಾಗಿರುವುದರಿಂದ ಶಾಸನಬದ್ಧ ಕಾನೂನು ನ್ಯಾಯಾಂಗಕ್ಕೆ ಯಾವುದೇ ಆಸ್ಪದ ಇಲ್ಲದಂತೆ ಮಾಡಿದೆ.

  • ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಂತಹ ಸಾಂವಿಧಾನಿಕ ನ್ಯಾಯಾಲಯಗಳು ಮಾತ್ರ ದಬ್ಬಾಳಿಕೆಯ ಕಾನೂನುಗಳನ್ನು ರದ್ದುಗೊಳಿಸಲು ಸಾಧ್ಯವಿರುವುದರಿಂದ ಇದಕ್ಕೆ ಸಮಯ ಹಿಡಿದು ಅಧೀನ ನ್ಯಾಯಾಲಯಗಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಕಡಿಮೆ ಅವಕಾಶ ದೊರೆಯುತ್ತದೆ

  • ವಿಜಯ್ ಮದನಾಲ್ ಚೌಧರಿ ಪ್ರಕರಣದಲ್ಲಿ ಪಿಎಂಎಲ್‌ಎಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ನಂತರ ಕಠಿಣತರವಾದ ಹಣ ವರ್ಗಾವಣೆ ನಿಗ್ರಹ ಕಾನೂನಿನಡಿ ಜಾಮೀನು ನೀಡುವುದು ವಿಚಾರಣಾ ನ್ಯಾಯಾಧೀಶರಿಗೆ ತುಂಬಾ ಕಷ್ಟಕರವಾಗಿದೆ.

  • ಪಂಕಜ್ ಪನ್ಸಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪಿಎಂಎಲ್ಎ ಆರೋಪಿಯ ಬಂಧನದ ಕಾರಣವನ್ನು ಲಿಖಿತವಾಗಿ ನೀಡಬೇಕು ಎಂದ ತೀರ್ಪು ನೀಡಿದ ಬಳಿಕವಷ್ಟೇ, ವಿಚಾರಣಾ ನ್ಯಾಯಾಲಯಗಳು ತಮ್ಮ ವಿವೇಚನಾಧಿಕಾರ ಚಲಾಯಿಸಲು ಸಾಧ್ಯವಾಯಿತು.

  •  ಪಿಎಂಎಲ್‌ಎ ಕಾನೂನು ಪರಿಶೀಲಿಸುವಂತೆ ಕೋರಿದ ಅರ್ಜಿಗಳನ್ನು ಎರಡು ವರ್ಷಗಳಿಂದ ಮುಂದೂಡುತ್ತಾ ಬರಲಾಗಿದೆ.

  • ನ್ಯಾಯಾಂಗ ನಾಗರಿಕರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು.

  • ದಬ್ಬಾಳಿಕೆಯ ಕಾನೂನುಗಳಿಂದಾಗಿ ನ್ಯಾಯಿಕ ಪೂರ್ವನಿದರ್ಶನಗಳಿಗೆ ಆಸ್ಪದವೇ ಇಲ್ಲದಂತಾಗಿದೆ.

    ಉನ್ನತ ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳಲು ಇದು ಸಕಾಲ.

  •  ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವಸಾಹತುಶಾಹಿ ಪಳೆಯುಳಿಕೆ ಇದೆ. ಆರೋಪ ಅಥವಾ ದೂರನ್ನು ತನಿಖೆ ಮಾಡುವ ಮೊದಲೇ ಬಂಧನಕ್ಕೆ ಮುಂದಾಗುವ ಕೆಲವೇ ಕಾನೂನು ವ್ಯವಸ್ಥೆಗಳಲ್ಲಿ ಭಾರತವೂ ಒಂದಾಗಿದೆ

  • ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಆರೋಪವನ್ನು ಮೊದಲು ತನಿಖೆ ಮಾಡಲಾಗುತ್ತದೆ ಮತ್ತು ನಂತರ ಬಂಧನ ನಡೆಯುತ್ತದೆ.  

  • ಭಾರತದಂತಹ ದೇಶಗಳನ್ನು ಹೊರತುಪಡಿಸಿ ಬೇರೆಡೆ ಪೊಲೀಸ್‌ ರಿಮಾಂಡ್‌ ಇಲ್ಲ ವಸಾಹತುಶಾಹಿ ಪಳೆಯುಳಿಕೆ ಪೊಲೀಸರಿಗೆ ಈ ಅಧಿಕಾರ ನೀಡಿದೆ.

  • ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯ ಬದಲು ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತೆ, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

  • ಭಾರತೀಯ ಕ್ರಿಮಿನಲ್ ಕಾನೂನನ್ನು ಪರಿಷ್ಕರಿಸುವ ಅಗತ್ಯವಿದೆ.