A1
A1
ಸುದ್ದಿಗಳು

ಆದಾಯ ತೆರಿಗೆ ಕಾಯಿದೆ: ಮೂರು ವರ್ಷದೊಳಗೆ ಪರಿಶೀಲನಾ ಪ್ರಕ್ರಿಯೆ ಮುಗಿಸಲು ಮದ್ರಾಸ್ ಹೈಕೋರ್ಟ್ ಆದೇಶ

Bar & Bench

ಆದಾಯ ತೆರಿಗೆ ಕಾಯಿದೆಯಡಿ ಪರೀಶೀಲನಾ ಪ್ರಕಿಯೆಗಳನ್ನು ಮೂರು ವರ್ಷ ಮೀರದಂತೆ ಸೂಕ್ತ ಅವಧಿಯೊಳಗೆ ಪೂರೈಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ [ಆದಾಯ ತೆರಿಗೆ ಆಯುಕ್ತರು ಮತ್ತು ರೋಕಾ ಬಾತ್‌ರೂಂ ಪ್ರಾಡಕ್ಟ್ಸ್‌ ಪ್ರೈ ಲಿ., ನಡುವಣ ಪ್ರಕರಣ].

"ಯಾವುದೇ ಕಾಲಮಿತಿಯನ್ನು (ಪರಿಶೀಲನಾ ಪ್ರಕ್ರಿಯೆಗೆ) ಸೂಚಿಸಿಲ್ಲ ಎಂದರೆ ಆಗ ಮೂರು ವರ್ಷಗಳ ಅವಧಿಯನ್ನು ಮೀರದಂತೆ ವಿವೇಚನಾಯುತವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಶಾಸನವು ನಿರ್ದಿಷ್ಟ ಅವಧಿಯೊಳಗೆ ಆದೇಶ ನೀಡಲು ಸೂಚಿಸಿದರೆ ಆಗ ಅದು ಮೂರು ವರ್ಷಕ್ಕಿಂತ ಹೆಚ್ಚಿರಲಿ ಕಡಿಮೆಯಿರಲಿ ಆ ನಿರ್ದಿಷ್ಟ ಅವಧಿಯೇ ಅನ್ವಯವಾಗುತ್ತದೆ" ಎಂದು ನ್ಯಾಯಮೂರ್ತಿಗಳಾದ ಆರ್‌ ಮಹದೇವನ್‌ ಮತ್ತು ಜೆ ಸತ್ಯನಾರಾಯಣ ಪ್ರಸಾದ್‌ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಅಧಿಕಾರಿಗಳು ಪ್ರಾರಂಭಿಸಿದ್ದ ಪರಿಶೀಲನಾ ಪ್ರಕ್ರಿಯೆಗಳನ್ನು ಹೊಸದಾಗಿ ಪರಿಗಣಿಸಲು ಸೂಚಿಸಿ ಐ ಟಿ ಇಲಾಖೆಗೆ ಕೆಲ ಪ್ರಕರಣಗಳನ್ನು ಮರಳಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಆದೇಶಗಳನ್ನು ಪ್ರಶ್ನಿಸಿ, ಆದಾಯ ತೆರಿಗೆ ಆಯುಕ್ತರು ಮತ್ತು ಕೆಲ ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಐಟಿ ಇಲಾಖೆ ಪರ ಹಿರಿಯ ವಕೀಲೆ ಹೇಮಾ ಮುರಳಿ ಕೃಷ್ಣನ್ ಹಾಗೂ ವಕೀಲ ಪ್ರಭು ಮುಕುಂತ್ ಅರುಣ್‌ ಕುಮಾರ್ ವಾದ ಮಂಡಿಸಿದರು. ಹಿರಿಯ ವಕೀಲರಾದ ಆರ್.ವಿ.ಈಶ್ವರ್‌ ಮತ್ತು ಕಮಲ್‌ ಸಾಹ್ನಿ ಖಾಸಗಿ ಕಂಪೆನಿಗಳನ್ನುಪ್ರತಿನಿಧಿಸಿದರು.