ಭಾರತ ಎಂಬುದು ಹಲವು ಸಂಸ್ಕೃತಿ, ನಾಗರಿಕತೆ ಹಾಗೂ ಧರ್ಮಗಳ ಆಡುಂಬೊಲ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್ ಅದನ್ನು ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದೆ [ಅಂಜುಮ್ ಕದರಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ ಅಲಾಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಧರ್ಮಬೋಧೆ ಎಂಬುದು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಧರ್ಮಗಳಲ್ಲಿಯೂ ಕಂಡುಬರುತ್ತದೆ. ಮುಸ್ಲಿಮರನ್ನು ಮುಖ್ಯವಾಹಿನಿಗೆ ತರುವುದು ಕಾಯಿದೆಯ ಉದ್ದೇಶವಾಗಿದೆ ಎಂದು ನ್ಯಾಯಾಲಯ ತಿಳಿಸಿತು.
"ಧಾರ್ಮಿಕ ಬೋಧನೆ ಎಂಬುದು ಮುಸ್ಲಿಮರಿಗೆ ವಿಶಿಷ್ಟವಲ್ಲ ಎಂಬುದು ನಿಮಗೆ ಗೊತ್ತಿದೆ. ನಮ್ಮ ದೇಶ ವಿವಿಧ ಸಂಸ್ಕೃತಿ, ನಾಗರಿಕತೆ, ಧರ್ಮಗಳ ಸಮ್ಮಿಳನವಾಗಿದೆ. ಅದನ್ನು ನಾವು ಸಂರಕ್ಷಿಸೋಣ. ಅವುಗಳನ್ನು ಮುಖ್ಯವಾಹಿನಿಗೆ ತರಲು ಕಾಯಿದೆ ಜಾರಿಗೆ ಬಂದಿದ್ದು. ಇಲ್ಲದಿದ್ದರೆ ನೀವು ಮೂಲಭೂತವಾಗಿ ಜನರನ್ನು ಬೇರ್ಪಡಿಸುತ್ತಿದ್ದೀರಿ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಮದರಸಾಗಳು ಮತ್ತು ವೈದಿಕ ಪಾಠಶಾಲೆಗಳ ಉದಾಹರಣೆಗಳನ್ನು ನೀಡಿದ ನ್ಯಾಯಾಲಯ ಭಾರತದಲ್ಲಿ ಅನೇಕ ತರಹದ ಧಾರ್ಮಿಕ ಬೋಧೆಗಳಿವೆ ಎಂದು ಹೇಳಿತು.
"ಈಗ ಸಂಸತ್ತು ಕೆಲವು ಮಾನದಂಡಗಳ ನಿಯಂತ್ರಣಕ್ಕಾಗಿ ಶಾಸನವನ್ನು ತಂದರೆ (ಏನು ತಪ್ಪಾಗಿದೆ)? " ಎಂದು ಅದು ಕೇಳಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೂಡ ಬೇರೆ ಬೇರೆ ಮೂಲಗಳ ಅನೇಕ ಪದ್ದತಿಗಳನ್ನು ಕಾಣಬಹುದು. ಹಿಂದೂ ಗ್ರಂಥಗಳಿಂದ ಆಯುರ್ವೇದ, ಜೈನರಿಂದ ಸಿದ್ಧ ಪದ್ದತಿ, ಪರ್ಷಿಯಾದಿಂದ ಯುನಾನಿ ಪದ್ಧತಿ ದೊರೆತಿದೆ. ಈಗ ಸಂಸತ್ತು ಅವುಗಳನ್ನು ನಿಯಂತ್ರಿಸಲು ಕಾನೂನು ತಂದರೆ ಅದರಿಂದ ಯಾರಿಗೂ ಹಾನಿಯಾಗದು ಎಂದು ನ್ಯಾ. ಚಂದ್ರಚೂಡ್ ಹೇಳಿದರು.
ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವ ಹೈಕೋರ್ಟ್‌ನ ತೀರ್ಪಿಗೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಕಾಯ್ದೆಯ ಸಿಂಧುತ್ವಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.
ಹೈಕೋರ್ಟ್ ಆದೇಶಕ್ಕೆ ತಡೆ ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಸರ್ಕಾರದಿಂದಲೇ ಸಂಪೂರ್ಣ ಧನ ಸಹಾಯ ಪಡೆಯುವ ಶಾಲೆಗಳಲ್ಲಿ ಧಾರ್ಮಿಕ ಬೋಧನೆಯನ್ನು ಮಾಡುವಂತಿಲ್ಲ ಎಂದು ಸಂವಿಧಾನ 28 (1) ವಿಧಿ ಹೇಳುತ್ತದೆ. ಆದರೆ, ಮದರಸಾ ಕಾಯಿದೆಯನ್ನು ರದ್ದುಪಡಿಸುವ ಸಂದರ್ಭದಲ್ಲಿ ಹೈಕೋರ್ಟ್ ಕಾಯಿದೆಯನ್ನು ತಪ್ಪಾಗಿ ಅರ್ಥೈಸಿದೆ. ಮದರಸಾ ಕಾಯಿದೆಯು ರಾಜ್ಯದಿಂದ ಧನಸಹಾಯ ಪಡೆಯುವ ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಶಿಕ್ಷಣ ನೀಡದಂತೆ ಹೇಳಿದೆ. ಕಾಯಿದೆಯ ಉದ್ದೇಶ ಮತ್ತು ನಿಯಮಗಳು ನಿಯಂತ್ರಣ ಸ್ವರೂಪದ್ದು ಮಾತ್ರವೇ ಆಗಿದೆ ಎಂದು ಅಭಿಪ್ರಾಯಪಟ್ಟಿತ್ತು.