CJI NV Ramana
CJI NV Ramana  
ಸುದ್ದಿಗಳು

ಸಾಮಾಜಿಕ ವಾಸ್ತವಗಳನ್ನು ಪರಿಗಣಿಸುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲ: ಸಿಜೆಐ ಎನ್ ವಿ ರಮಣ

Bar & Bench

ಪ್ರಸ್ತುತ ಭಾರತೀಯ ನ್ಯಾಯದಾನ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ರೀತಿಯಲ್ಲಿ ಅನೇಕ ಕಳವಳಕಾರಿ ಅಂಶಗಳು ಇರುವ ಹಿನ್ನೆಲೆಯಲ್ಲಿ ನ್ಯಾಯವಿತರಣಾ ವ್ಯವಸ್ಥೆಯನ್ನು ಭಾರತೀಕರಣಗೊಳಿಸುವುದು ಅತ್ಯಗತ್ಯ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶನಿವಾರ ಪುನರುಚ್ಚರಿಸಿದರು.

ಒಡಿಶಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆ ಹಿನ್ನೆಲೆಯಲ್ಲಿ ಒಡಿಶಾ ಹೈಕೋರ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸ್ವಾತಂತ್ರ್ಯ ದೊರೆತ 74 ವರ್ಷಗಳ ನಂತರವೂ, ಸಾಂಪ್ರದಾಯಿಕ ಮತ್ತು ಕೃಷಿ ಸಮಾಜಗಳು ಸಾಂಪ್ರದಾಯಿಕ ಜೀವನ ವಿಧಾನ ಅನುಸರಿಸುತ್ತಿದ್ದು ನ್ಯಾಯಾಲಯಗಳನ್ನು ಸಂಪರ್ಕಿಸಲು ಈಗಲೂ ಹಿಂಜರಿಯುತ್ತಿವೆ” ಎಂದು ಅವರು ಹೇಳಿದರು.

"ನಮ್ಮ ಕಾನೂನು ವಿಧಾನ , ನ್ಯಾಯದಾನ, ಭಾಷೆ ಹಾಗೂ ನ್ಯಾಯಾಲಯದ ಪ್ರತಿಯೊಂದೂ ಅವರಿಗೆ ಪರಕೀಯವಾಗಿ ತೋರುತ್ತಿದೆ. ಕಾಯಿದೆಗಳ ಸಂಕೀರ್ಣ ಭಾಷೆ ಮತ್ತು ನ್ಯಾಯದಾನದ ಪ್ರಕ್ರಿಯೆ ನಡುವೆ ಸಾಮಾನ್ಯ ಮನುಷ್ಯ ತನ್ನ ಕುಂದುಕೊರತೆಯ ಹಣೆಬರಹದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ನ್ಯಾಯ ಹುಡುಕುವವರು ವ್ಯವಸ್ಥೆಗೆ ಹೊರಗಿನವರಂತೆ ಭಾಸವಾಗುತ್ತಾರೆ” ಎಂದು ವಿವರಿಸಿದರು.

ಭಾರತೀಯ ಕಾನೂನು ವ್ಯವಸ್ಥೆ ತನ್ನ ಪ್ರಸ್ತುತ ರೂಪದಲ್ಲಿ ವಿವಿಧ ಸಾಮಾಜಿಕ ವಾಸ್ತವ ಮತ್ತು ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.

"ದುರದೃಷ್ಟವಶಾತ್, ಎಲ್ಲಾ ವಾಸ್ತವಾಂಶಗಳು ಮತ್ತು ಕಾನೂನು ನ್ಯಾಯಾಲಯದಲ್ಲಿ ಮಂಥನಗೊಳ್ಳುವುದರಲ್ಲೇ ಹೆಚ್ಚು ಕಳೆದು ಹೋಗುವ ರೀತಿಯಲ್ಲಿ ನಮ್ಮ ವ್ಯವಸ್ಥೆ ವಿನ್ಯಾಸಗೊಂಡಿದೆ. ಜನ ತಮ್ಮ ಸಮಸ್ಯೆಗಳನ್ನು ನ್ಯಾಯಾಲಯಕ್ಕೆ ತರುತ್ತಿರಬಹುದು, ಆದರೆ ಅಂತಿಮವಾಗಿ ಅದೊಂದು ʼಪ್ರಕರಣವಾಗಿ ಉಳಿದುಬಿಡುತ್ತದೆ” ಎಂದು ಸಿಜೆಐ ತಿಳಿಸಿದರು.

ಇಂತಹ ಸಮಸ್ಯೆಗಳನ್ನು ಭಾರತೀಕರಣದ ಮೂಲಕ ಪರಿಹರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. "ನ್ಯಾಯಾಲಯಗಳು ಈ ಕಳವಳ ಹೋಗಲಾಡಿಸಲು ಸಮರ್ಥವಾಗಿವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕಟು ವಾಸ್ತವ ಎಂದರೆ ನ್ಯಾಯದಾನ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿ ಮಾಡಲು ಕಾನೂನು ಚೌಕಟ್ಟನ್ನು ದೊಡ್ಡಮಟ್ಟದಲ್ಲಿ ಬದಲಿಸದ ಹೊರತು, ನಾವು ಈ ಗುರಿ ಸಾಧಿಸಲು ಸಾಧ್ಯವಿಲ್ಲ," ಎಂದರು.

ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಯು ಯು ಲಲಿತ್, ವಿನೀತ್‌ ಸರಣ್‌ ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್‌ ಮತ್ತಿತರರು ಭಾಗವಹಿಸಿದ್ದರು.