ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಅತ್ಯುತ್ತಮ ಸಂಬಂಧ ಇದ್ದು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಬಿಕ್ಕಟ್ಟು ಎಂದು ಬಿಂಬಿಸುವ ಯಾವುದೇ ವರದಿಗಳು ಜಗತ್ತಿಗೆ ತಪ್ಪು ಸಂದೇಶ ರವಾನಿಸುತ್ತವೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ತಿಳಿಸಿದರು.
ಮಧುರೈನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹೆಚ್ಚುವರಿ ನ್ಯಾಯಾಲಯ ಕಟ್ಟಡಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಸ್ತುತ ಕಾರ್ಯಾಂಗ ಮತ್ತು ನ್ಯಾಯಾಂಗವು ಪರಿಪೂರ್ಣ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದರು.
"ನ್ಯಾಯಾಂಗದೊಂದಿಗೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ. ಕೆಲವೊಮ್ಮೆ ಮಾಧ್ಯಮಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವೆ ಅಥವಾ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ವರದಿ ಮಾಡಿದಾಗ ನನಗೆ ಬೇಸರವಾಗುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತದ್ದು ಹೆಮ್ಮೆಪಡುವಂತಹ ಪ್ರಜಾಪ್ರಭುತ್ವವಾಗಿದೆ. ಯಾವುದನ್ನಾದರೂ ಅನುಸಂಧಾನಗೊಳಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ವಿಶೇಷವಾಗಿ ಆಡಳಿತಾತ್ಮಕ ವಲಯಕ್ಕೆ ಸಂಬಂಧಿಸಿದಂತೆ ನಮಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಅದು ವೈರುಧ್ಯದಿಂದ ಕೂಡಿದೆ ಎಂದು ಅರ್ಥವಲ್ಲ. ಹಾಗೆ ಹೇಳುವುದು ಜಗತ್ತಿಗೆ ತಪ್ಪು ಸಂದೇಶ ಕಳಿಸುತ್ತದೆ” ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ಅಂಗಗಳು ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಲು ಬಯಸುವುದಾಗಿ ರಿಜಿಜು ಹೇಳಿದರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಎಂ ಎಂ ಸುಂದರೇಶ್, ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತಿತರರು ಉಪಸ್ಥಿತರಿದ್ದರು.