ನಮ್ಮದು ಪಿತೃಪ್ರಧಾನ ಸಮಾಜವಾಗಿದ್ದು, ಸಬಲೆಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಅಂತಹ ಸಮಾಜಕ್ಕೆ ತಿಳಿದಿಲ್ಲ ಎಂದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ವ್ಯವಸ್ಥಿತ ಪಿತೃಪ್ರಧಾನತೆ ಕುರಿತಂತೆ ಸೋಮವಾರ ಪ್ರಬಲ ಅಭಿಪ್ರಾಯಗಳನ್ನು ಮಂಡಿಸಿದರು.
ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರನ್ನೂ ಒಳಗೊಂಡ ವಿಭಾಗೀಯ ಪೀಠ ಜಂಟಿ ವಿಚ್ಚೇದನ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ, ನ್ಯಾಯಮೂರ್ತಿ ನಾಗರತ್ನ ಅವರು ಮಹಿಳೆಯರು ಎದುರಿಸಬೇಕಾದ ಸಂದಿಗ್ಧತೆಗಳ ಬಗ್ಗೆ ಕೆಲ ಸ್ಪಷ್ಟ ಹೇಳಿಕೆ ನೀಡಲು ನಿರ್ಧರಿಸಿದರು.
"ಸಮಾಜ ಸದಾ ಮಹಿಳೆಯನ್ನು ಕೀಳಾಗಿ ಕಾಣುತ್ತದೆ. ನಮ್ಮದು ಪಿತೃಪ್ರಧಾನ ಸಮಾಜ. ಜನ ಯಾವಾಗಲೂ ಸ್ತ್ರೀ ಸಬಲೀಕರಣ ಎಂದು ಹೇಳುತ್ತಾರೆ, ಆದರೆ ಸಮಾಜಕ್ಕೆ ಸಬಲ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕೆಂದು ತಿಳಿದಿಲ್ಲ. ಸಶಕ್ತ ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಪೋಷಕರು ತಮ್ಮ ಪುತ್ರರಿಗೆ ಕಲಿಸುವುದಿಲ್ಲ. ಅದು ಪುರುಷರ ಸಮಸ್ಯೆ ಎಂಬುದಾಗಿ ನಾನು ಹೇಳುತ್ತೇನೆ ”ಎಂದು ನ್ಯಾಯಮೂರ್ತಿ ನಾಗರತ್ನ ತಿಳಿಸಿದರು.
ಇಷ್ಟಾದರೂ ಆರ್ಥಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಪಡೆದ ಮಹಿಳೆಗೆ ತನ್ನ ಕುಟುಂಬದೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿದಿರಬೇಕು ಮತ್ತು ಅದೇ ಅವಳ ವಿವಾಹವನ್ನು ಮುರಿಯಲು ಕಾರಣವಾಗಬಾರದು ಎಂದು ಪೀಠ ಹೇಳಿದೆ. ಮದುವೆಯಾದ ನಂತರ ಸಂಸಾರದಲ್ಲಿ ಹೆಂಡತಿಯ ಚಿತ್ರಣ ಮೂಡಿದ ಬಳಿಕ ಅತ್ತೆ ಕೂಡ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂದು ಕೂಡ ಸ್ಪಷ್ಟಪಡಿಸಿದೆ.
ತಮ್ಮ ಮನೆಯಲ್ಲಿ ತಾವು ಒಬ್ಬಳೇ ಮಗಳಾಗಿರುವುದರಿಂದ ತಮ್ಮ ಸಂಗಾತಿ ಜೊತೆ ಹೊಂದಾಣಿಕೆ ಕಷ್ಟವಾಗುತ್ತಿದೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆ ತಿಳಿಸಿದಾಗ ನ್ಯಾಯಾಲಯ “ನೀವು ಒಬ್ಬಳೇ ಮಗಳು ಎಂದ ಮಾತ್ರಕ್ಕೆ ನಿಮ್ಮ ಗಂಡನನ್ನು ನಿರ್ಲಕ್ಷಿಸಬಹುದು ಎಂದರ್ಥವಲ್ಲ” ಎಂದು ಎಚ್ಚರಿಕೆ ನೀಡಿತು.
ಸಮಾಲೋಚನಾ ಸೆಷನ್‌ಗಳಿಗೆ ಹಾಜರಾಗಲು ಮತ್ತು ಪ್ರತಿ ವೇಳೆ ಪರಸ್ಪರ ಸಂವಹನ ನಡೆಸುವಂತೆ ಪೀಠ ದಂಪತಿಗೆ ಪ್ರೋತ್ಸಾಹ ನೀಡಿತು. ʼಮದುವೆ ಎಂಬುದು ಆತ್ಯಂತಿಕವಾಗಿ ಹೊಂದಾಣಿಕೆ ಮಾತ್ರ. ಅದು ಇಬ್ಬರು ವ್ಯಕ್ತಿಗಳ ನಡುವೆ ಮಾತ್ರ ನಡೆಯುತ್ತದೆʼ ಎಂದು ತಿಳಿಸಿತು.
ವಿಚಾರಣೆ ವೇಳೆ ಖುದ್ದು ಹಾಜರಿದ್ದ ದಂಪತಿಯ ಮುಖ ಈ ಹಂತದಲ್ಲಿ ದಪ್ಪಗಾಗಿದ್ದನ್ನು ಗಮನಿಸಿದ ನ್ಯಾಯಾಲಯ “ಮುಖ ದಪ್ಪಗೆ ಮಾಡುವ ಅಗತ್ಯವಿಲ್ಲ. ನಾವು ನಿಮಗಾಗಿ ಕಾರ್ಯೋನ್ಮುಖರಾಗಿದ್ದೇವೆ. ಇದು ಈಗಿನ ಪೀಳಿಗೆಯ ಪ್ರವೃತ್ತಿಯಾಗಿದೆ. ನಿಮ್ಮದು ತಪ್ಪು ಎಂಬುದನ್ನು ನೀವು ಒಪ್ಪುವುದಿಲ್ಲ” ಎಂದು ಹೇಳಿತು.
ಎರಡು ವರ್ಷಗಳ ಕಾಲ ಸಂಸಾರ ನಡೆಸಿದ ಜೋಡಿ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ಕೊನೆಯ ಹಂತದಲ್ಲಿ ನ್ಯಾಯಾಲಯ ʼನಿಮ್ಮ ಒಳಿತಿಗಾಗಿಯೇ ನಿಮ್ಮ ನಡುವಿನ ಸೇತುವನ್ನು ಸುಟ್ಟು ಹಾಕಬೇಡಿʼ ಎಂದು ಕಿವಿಮಾತು ಹೇಳಿತು. ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಲಾಗಿದೆ.