ಸುದ್ದಿಗಳು

ನಮ್ಮ ನಿಷ್ಠೆ ಭಾರತದ ಸಂವಿಧಾನಕ್ಕೆ, ನಮ್ಮ ಧರ್ಮ ಕಾನೂನು: ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು

ಸಮಾಜ ಸುಧಾರಕ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಎಂ ವಿಶ್ವೇಶ್ವರಯ್ಯ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಅವರನ್ನು ಸ್ಮರಿಸಿದ ಸಿಜೆ ಬಕ್ರು.

Bar & Bench

“ನಮ್ಮ ಪ್ರಮಾಣ ವಚನದ ನಿಷ್ಠೆ ಭಾರತದ ಸಂವಿಧಾನಕ್ಕೆ, ನಮ್ಮ ಧರ್ಮ ಕಾನೂನು” ಎಂದು ನೂತನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹೇಳಿದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ವಕೀಲರ ಪರಿಷತ್‌ ಶನಿವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸ ಕಚೇರಿಯನ್ನು ನಮ್ರತೆ ಮತ್ತು ಜವಾಬ್ದಾರಿಯಿಂದ ಪ್ರವೇಶಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ನ್ಯಾ. ಬಕ್ರು ಹೇಳಿದರು.

“ನಮ್ಮ ಪ್ರಮಾಣ ವಚನ ನಿಷ್ಠೆ ಭಾರತದ ಸಂವಿಧಾನಕ್ಕೆ ಇರಲಿದ್ದು, ಕಾನೂನು ನಮ್ಮ ಧರ್ಮ. ಸಾಂವಿಧಾನಿಕ ಸಂಸ್ಥೆಗಳು ದುರ್ಬಲವಾಗಿದ್ದರೆ ಸಂವಿಧಾನ ಮತ್ತು ಅದು ಖಾತರಿಪಡಿಸುವ ಸ್ವಾತಂತ್ರ್ಯಗಳು ಸುಸ್ಥಿರವಾಗಿರುವುದಿಲ್ಲ. ಈ ಸಂಸ್ಥೆಯ ಮೇಲೆ ನೀವು ಇಟ್ಟಿರುವ ಅಚಲವಾದ ನಂಬಿಕೆಯು ಅದನ್ನು ಸುಸ್ಥಿರಗೊಳಿಸುತ್ತದೆ. ಈ ನಂಬಿಕೆ ತಪ್ಪಾಗದಂತೆ ನೋಡಿಕೊಳ್ಳುವುದು ನಮ್ಮ ಕೆಲಸವಾಗಿದೆ” ಎಂದರು.

“ನಮ್ಮ ದೇಶದ ಕಾನೂನು ಮತ್ತು ಸಾಂವಿಧಾನಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ರಾಜ್ಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವುದಕ್ಕೆ ಹೆಮ್ಮೆ ಎನಿಸುತ್ತದೆ. ಕರ್ನಾಟಕವು ಅಸಾಧಾರಣ ನ್ಯಾಯಶಾಸ್ತ್ರಜ್ಞರು, ವಿದ್ವಾಂಸರು ಮತ್ತು ಸುಧಾರಕರನ್ನು ಕಂಡಿದೆ. ವಕೀಲಿಕೆಯನ್ನು ಉನ್ನತೀಕರಿಸಿದ ಮತ್ತು ನ್ಯಾಯದ ಆದರ್ಶಗಳನ್ನು ಆಳಗೊಳಿಸಿದ ಪುರುಷರು ಮತ್ತು ಮಹಿಳೆಯರನ್ನು ನೀಡಿರುವ ಸುದೀರ್ಘ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಾಂಡಿತ್ಯ, ಸಂಯಮ ಮತ್ತು ಘನತೆಯನ್ನು ತಂದ ನಮ್ಮ ಹೆಮ್ಮೆ ಎನ್‌ ವೆಂಕಟಾಚಲಯ್ಯ ಅವರನ್ನು ಸ್ಮರಿಸುತ್ತೇನೆ. ಮಾನವ ಹಕ್ಕುಗಳು ಮತ್ತು ನ್ಯಾಯಾಂಗ ಪ್ರಾಮಾಣಿಕತೆಗೆ ಅವರ ಬದ್ಧತೆಯು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ” ಎಂದರು.

“ಸುಧಾರಣಾವಾದಿ ಬಸವಣ್ಣನವರು ಸಮ ಸಮಾಜದ ಬಗ್ಗೆ ಬೋಧಿಸಿದ್ದಾರೆ. ಘನತೆ, ಸಮಾನತೆ ಮತ್ತು ನೈತಿಕ ಸ್ಥೈರ್ಯದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗೆಗಿನ ಬದ್ಧತೆಯು ನಮಗೆ ದಾರಿ ದೀಪವಾಗಿವೆ. ಸರ್‌ ಎಂ ವಿಶ್ವೇಶ್ವರಯ್ಯ ಅವರು ನಮಗೆ ಶಿಸ್ತಿನ ಪ್ರಾಮುಖ್ಯತೆ ತಿಳಿಸಿಕೊಟ್ಟಿದ್ದಾರೆ. ಸಾರ್ವಜನಿಕ ಸೇವೆ ಅದು ಎಂಜಿನಿಯರಿಂಗ್‌ ಆಗಲಿ, ಆಡಳಿತ ಅಥವಾ ಕಾನೂನಾಗಲಿ ಅದಕ್ಕೆ ಶಿಸ್ತು ಅತ್ಯಂತ ಮುಖ್ಯ ಎಂದು ತಿಳಿಸಿಕೊಟ್ಟಿದ್ದಾರೆ” ಎಂದು ಸ್ಮರಿಸಿದರು.

Justice V Kameswar Rao

ಇದೇ ವೇಳೆ, ಅಲಾಹಾಬಾದ್‌ ಮತ್ತು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿಗಳಾದ ಜಯಂತ್‌ ಬ್ಯಾನರ್ಜಿ ಮತ್ತು ದಿನೇಶ್‌ ಕುಮಾರ್‌ ಸಿಂಗ್‌ ಅವರಿಗೆ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಸ್ವಾಗತ ಕೋರಲಾಯಿತು. ಇದೇ ವೇಳೆ, ಮಾತೃ ಹೈಕೋರ್ಟ್‌ ಆದ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ಕರ್ನಾಟಕ ಹೈಕೋರ್ಟ್‌ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ ಕಾಮೇಶ್ವರ ರಾವ್‌ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌ ಎಸ್‌ ಮಿಟ್ಟಲಕೋಡ್‌, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌, ಕೆಎಸ್‌ಬಿಎಸ್‌ ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ವಕೀಲ ಸಮುದಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.