Vidhana Soudha  
ಸುದ್ದಿಗಳು

ರಾಜ್ಯದ 31 ಜಿಲ್ಲಾ ನ್ಯಾಯಾಲಯಗಳಲ್ಲಿ 5,926 ಹುದ್ದೆಗಳು ಖಾಲಿ: ಸದನಕ್ಕೆ ಸರ್ಕಾರದ ಲಿಖಿತ ಉತ್ತರ

ಜಿಲ್ಲಾ ನ್ಯಾಯಾಧೀಶರು, ತಾತ್ಕಾಲಿಕ ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿವಿಲ್‌ ನ್ಯಾಯಾಧೀರು ಹುದ್ದೆಗಳು ಒಳಗೊಂಡು 1,395 ಹುದ್ದೆಗಳಿದ್ದು, ಈ ಪೈಕಿ 1,152 ಹುದ್ದೆಗಳು ಭರ್ತಿಯಾಗಿವೆ.

Bar & Bench

ರಾಜ್ಯದ 31 ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 21,541 ಹುದ್ದೆಗಳು ಇದ್ದು, ಈ ಪೈಕಿ 5,926 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಸದನಕ್ಕೆ ತಿಳಿಸಿದೆ.

ಬಿಜೆಪಿಯ ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ್‌ ಟೆಂಗಿನಕಾಯಿ ಅವರು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಮಂಜೂರಾಗಿರುವ ಮತ್ತು ಖಾಲಿ ಇರುವ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಯ ಮಾಹಿತಿ ಒದಗಿಸುವಂತೆ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಲಿಖಿತ ಉತ್ತರ ಒದಗಿಸಿದ್ದಾರೆ.

ನಿರ್ದಿಷ್ಟವಾಗಿ ನ್ಯಾಯಾಧೀಶರ ಹುದ್ದೆಗಳಿಗೆ ಬರುವುದಾದರೆ, ಜಿಲ್ಲಾ ನ್ಯಾಯಾಧೀಶರು, ತಾತ್ಕಾಲಿಕ ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿವಿಲ್‌ ನ್ಯಾಯಾಧೀಶರ ಹುದ್ದೆಗಳು ಒಳಗೊಂಡು 1,395 ಹುದ್ದೆಗಳಿದ್ದು, ಈ ಪೈಕಿ 1,152 ಹುದ್ದೆಗಳು ಭರ್ತಿಯಾಗಿವೆ. ಇನ್ನು 243 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಲಾಗಿದೆ.

ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿರುವ ಅಡ್ವೊಕೇಟ್‌ ಜನರಲ್‌ ಕಚೇರಿಗಳಲ್ಲಿ ಕ್ರಮವಾಗಿ 112, 17 ಮತ್ತು 16 ಮಂದಿ ಸೇರಿ ಒಟ್ಟು 155 ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಅಡ್ವೊಕೇಟ್‌ ಜನರಲ್‌ ಕಚೇರಿಯಲ್ಲಿ ಒಂದು ಸರ್ಕಾರಿ ವಕೀಲರ ಹುದ್ದೆ ಖಾಲಿ ಇದೆ. ಇನ್ನು 31 ಜಿಲ್ಲಾ ನ್ಯಾಯಾಲಯಗಳಲ್ಲಿ 157 ಮಂದಿ ವಕೀಲರು ಕರ್ತವ್ಯ ನಿರತರಾಗಿದ್ದಾರೆ ಎಂದು ವಿವರಿಸಲಾಗಿದೆ.

ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳ ನೇಮಕವನ್ನು ಸರ್ಕಾರವು ಯಾವ ಕಾಲಮಿತಿಯೊಳಗೆ ಭರ್ತಿ ಮಾಡಲಿದೆಯೇ ಎಂಬ ಪ್ರಶ್ನೆಗೆ ಜಿಲ್ಲಾ ನ್ಯಾಯಾಧೀಶರ ಖಾಲಿ ಇರುವ 10 ಹುದ್ದೆಗಳನ್ನು ಶೇ. 10ರಂತೆ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಮುಂದಿನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.

2023ರ ಅಕ್ಟೋಬರ್‌ 19ರಂದು 14 ಜಿಲ್ಲಾ ನ್ಯಾಯಾಧೀಶರನ್ನು ನೇರವಾಗಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಇಬ್ಬರನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಿಸಲು ಆಯ್ಕೆ ಮಾಡಲಾಗಿದೆ. ಉಳಿದಂತೆ 12 ಬ್ಯಾಕ್‌ಲಾಗ್‌ ಮತ್ತು ಹೊಸ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಹಿರಿಯ ಸಿವಿಲ್‌ ನ್ಯಾಯಾಧೀಶರ ಕೇಡರ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಸ್ಥಳಾವಕಾಶ ಲಭ್ಯವಾದ ತಕ್ಷಣ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಅಲ್ಲದೇ, 2025ರ ಫೆಬ್ರವರಿ 10ರಂದು 158 ಸಿವಿಲ್‌ ನ್ಯಾಯಾಧೀಶರ ಹುದ್ದೆಗಳನನು ಭರ್ತಿ ಮಾಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ.

ಜಿಲ್ಲಾ ನ್ಯಾಯಾಂಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನೇಮಕಾತಿ ಪ್ರಾಧಿಕಾರವಾಗಿದ್ದು, ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 2024ರ ನವೆಂಬರ್‌ 25ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ನೇರ ನೇಮಕಾತಿಗೆ ಯಾವುದೇ ಹೊಸ ಅಧಿಸೂಚನೆ ಹೊರಡಿಸದಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ತಿಳಿಸಲಾಗಿದೆ. ಇನ್ನು ಖಾಲಿ ಇರುವ ಸರ್ಕಾರಿ ವಕೀಲರ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಲಾಗಿದೆ. 

Vacant Judges posts.pdf
Preview