Overweight police officers
Overweight police officers 
ಸುದ್ದಿಗಳು

ದಾಳಿ ವೇಳೆ ಆರೋಪಿಗಳನ್ನು ಓಡಿ ಹಿಡಿಯಲಾಗದ ದಡೂತಿ ಪೊಲೀಸರ ಬಗ್ಗೆ ಪಂಜಾಬ್‌-ಹರ್ಯಾಣ ಹೈಕೋರ್ಟ್‌ ಹೇಳಿದ್ದೇನು?

Bar & Bench

ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿರುವ ಸಂಬಂಧ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕಳೆದ ವಾರ ಕೆಲ ನಿರ್ದೇಶನಗಳನ್ನು ಪಂಜಾಬ್‌ ಪೊಲೀಸ್‌ ಇಲಾಖೆಗೆ ನೀಡಿದೆ.

ನಿರೀಕ್ಷಣಾ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ‘ನಾಲ್ಕರಿಂದ ಐದು ಅಧಿಕಾರಿಗಳು ಘಟನಾ ಸ್ಥಳದಲ್ಲಿ ಹಾಜರಿದ್ದರೂ ಕೂಡ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಇವುಗಳಲ್ಲಿ ಬಹುತೇಕವು ಮದ್ಯ ಮತ್ತು ಮಾದಕವಸ್ತು ಪ್ರಕರಣಗಳಾಗಿದ್ದು ರಹಸ್ಯ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು ಎಂದು ಕೋರ್ಟ್ ಹೇಳಿದೆ.

ಸಾಮಾನ್ಯವಾಗಿ ಮಧ್ಯವಯಸ್ಕ ಆರೋಪಿಗಳು ದಾಳಿ ನಡೆಸಿದ ಕಟ್ಟಡಗಳ ಗೋಡೆ ಎಗರಿ, ಛಾವಣಿಯಿಂದ ಹಾರಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಭಾರೀ ತೂಕದ ಮತ್ತು ಓಡಲಾಗದ ಪೊಲೀಸರನ್ನು ನಿಯೋಜಿಸದಂತೆ ಪಂಜಾಬ್ ತನಿಖಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಲಾಗುತ್ತಿದೆ.
ಪಂಜಾಬ್- ಹರ್ಯಾಣ ಹೈಕೋರ್ಟ್

ಪರ್ಯಾಯವಾಗಿ, ಯುವ ಮತ್ತು ದೈಹಿಕವಾಗಿ ಸಮರ್ಥರಿರುವ ಅಧಿಕಾರಿಗಳನ್ನು ಅಬಕಾರಿ ಕಾಯಿದೆಯಡಿ ನಡೆಸುವ ದಾಳಿಗಳಿಗೆ ಪಂಜಾಬ್ ತನಿಖಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ನಿಯೋಜಿಸಬಹುದು ಎಂದು ಕೋರ್ಟ್ ಸಲಹೆ ನೀಡಿದೆ.

ಮಾದಕವಸ್ತು ಪ್ರಕರಣದ ದಾಳಿಯೊಂದರ ವಿಚಾರಣೆ ವೇಳೆ ಪ್ರಕರಣದಲ್ಲಿ ಹಲವು ದೋಷಗಳು ಕಂಡುಬಂದಿದ್ದರಿಂದ ನ್ಯಾಯಾಲಯವು ಮಲ್ಕಿತ್ ಸಿಂಗ್ ಎಂಬ ಆರೋಪಿಗೆ ಜಾಮೀನು ನೀಡಿತು. ಮಲ್ಕಿತ್‌ ಸಿಂಗ್‌ ದಾಳಿಯ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದ ಎನ್ನಲಾಗಿತ್ತು. ಆತನನ್ನು ಹಿಡಿಯಲು ವಿಫಲರಾಗಿದ್ದ ಹೆಡ್‌ಕಾನ್ಸ್‌ಟೇಬಲ್ ತಾನು ಈ ಹಿಂದೆ ಆತನನ್ನು ನೋಡಿರುವುದಾಗಿ ನೀಡಿದ್ದ‌ ಹೇಳಿಕೆಯ ಆಧಾರದಲ್ಲಿ ಸಿಂಗ್ ವಿರುದ್ಧ ಮಾದಕವಸ್ತು ಮತ್ತು ಅಮಲೇರಿಸುವ ಪದಾರ್ಥಗಳ ನಿಷೇಧ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆದರೆ, ಸದರಿ ಪ್ರಕರಣದ ವಿಚಾರಣೆಯ ವೇಳೆ ಆರೋಪಿಯು ತಾನು ನಿರಪರಾಧಿಯೆಂದು ತಿಳಿಸಿ, ತನಗೆ ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆರೋಪಿಯು 45 ವರ್ಷದ ಮಧ್ಯವಯಸ್ಕನಾಗಿರುವುದು, ಸ್ಥಳದಲ್ಲಿ ನಾಲ್ಕೈದು ಪೊಲೀಸರು ಇದ್ದೂ ಆರೋಪಿಯನ್ನು ಹಿಡಿಯಲು ಸಾಧ್ಯವಾಗದಿರುವುದು ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಹೆಡ್‌ ಕಾನ್ಸ್‌ಟೇಬಲ್‌ ಹೇಳಿಕೆಗಳ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿ ಆರೋಪಿಗೆ ಜಾಮೀನು ನೀಡಿತು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ಹಿಂದೆಯೂ ಇದೇ ರೀತಿ ಮಧ್ಯವಯಸ್ಕ ಆರೋಪಿಗಳು ದಾಳಿ ನಡೆದ ಸ್ಥಳಗಳಿಂದ ತಪ್ಪಿಸಿಕೊಂಡಿರುವ ಬಗ್ಗೆ ಉಲ್ಲೇಖಿಸುತ್ತಾ, ಪೊಲೀಸ್‌ ಇಲಾಖೆಯ ನ್ಯೂನತೆಗಳ ಬಗ್ಗೆ, ಪೊಲೀಸರ ದೈಹಿಕ ಕ್ಷಮತೆಯ ಬಗ್ಗೆ ಪ್ರಶ್ನೆ ಎತ್ತಿದ್ದರು. ದಾಳಿಯ ವೇಳೆ ಆರೋಪಿಗಳನ್ನು ಹಿಡಿಯಲು ವಿಫಲರಾದ ಇತ್ತೀಚಿನ ಎಲ್ಲ ಪ್ರಕರಣಗಳ ಪೊಲೀಸರ ದೈಹಿಕ ಕ್ಷಮತೆಯ ಪರೀಕ್ಷೆ ನಡೆಸುವಂತೆ ನ್ಯಾಯಾಲಯವು ಸೂಚಿಸಿತು. ಅಲ್ಲದೆ, ಆ ಎಲ್ಲ ಪ್ರಕರಣಗಳ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಸೂಚಿಸಿತು.

ಅಗತ್ಯ ಇರುವ ಪೊಲೀಸರಿಗೆ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ತರಬೇತಿಗೆ ಕಳುಹಿಸಲೂ ಇದೇ ವೇಳೆ ನ್ಯಾಯಪೀಠವು ಸೂಚಿಸಿತು. ಅದು ಸಾಧ್ಯವಾಗದ ಪಕ್ಷದಲ್ಲಿ, ದಾಳಿಯ ವೇಳೆ ದೈಹಿಕವಾಗಿ ಸಕ್ಷಮವಾಗಿರುವ ಯುವ ಪೊಲೀಸರನ್ನು ನೇಮಿಸುವಂತೆ ನಿರ್ದೇಶಿಸಿತು .

ಆದೇಶವನ್ನು ಇಲ್ಲಿ ಓದಿ:

Malkit_Singh___Kaka_v__State_of_Punjab (1).pdf
Preview