Pahalgam 
ಸುದ್ದಿಗಳು

ಪಹಲ್ಗಾಮ್‌ ದಾಳಿ: ತನಿಖೆಗೆ ಕೋರಿದ್ದ ಪಿಐಎಲ್‌ ವಿಚಾರಣೆಗೆ ನಕಾರ, ಸೇನಾ ಪಡೆಗಳ ಸ್ಥೈರ್ಯ ಕುಗ್ಗಿಸಬಾರದು ಎಂದ ಸುಪ್ರೀಂ

ನ್ಯಾಯಮೂರ್ತಿಗಳ ಕೆಲಸವು ವ್ಯಾಜ್ಯಗಳನ್ನು ನಿರ್ಣಯಿಸುವುದೇ ವಿನಾ ತನಿಖೆ ನಡೆಸುವುದಲ್ಲ ಎಂದ ನ್ಯಾಯಾಲಯ.

Bar & Bench

ಪಹಲ್ಗಾಮ್‌ನಲ್ಲಿ ಈಚೆಗೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಗುರುವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಇಂಥ ಸಂದರ್ಭದಲ್ಲಿ ಸೇನಾ ಪಡೆಗಳ ಸ್ಥೈರ್ಯ ಕುಂದಿಸದಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎನ್‌ ಕೆ ಸಿಂಗ್‌ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಇದು ಪ್ರತಿಯೊಬ್ಬ ನಾಗರಿಕನು ಭಯೋತ್ಪಾದನೆ ವಿರುದ್ಧ ಕೈಜೋಡಿಸಿರುವ ಮಹತ್ವದ ಸಂದರ್ಭವಾಗಿದ್ದು, ಸೇನಾ ಪಡೆಗಳ ಸ್ಥೈರ್ಯ ಕುಂದಿಸಬಾರದು. ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ” ಎಂದು ಪೀಠ ತಿಳಿ ಹೇಳಿತು.

“ವಕೀಲರು ದಯಮಾಡಿ ಜವಾಬ್ದಾರಿ ತೋರಬೇಕು. ಇಂಥ ಸಂದರ್ಭದಲ್ಲಿ ನೀವು ಈ ರೀತಿ ಸ್ಥೈರ್ಯ ಕುಂದಿಸಬಹುದೇ? ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಎಂದಿನಿಂದ ತನಿಖೆಯಲ್ಲಿ ತಜ್ಞರಾದರು? ಅದನ್ನು ನಾವು ಯಾವಾಗಿನಿಂದ ಗಳಿಸಿಕೊಂಡಿದ್ದೇವೆ? ನಾವು ವ್ಯಾಜ್ಯಗಳನ್ನು ಮಾತ್ರ ನಿರ್ಧರಿಸುತ್ತೇವೆ” ಎಂದು ನ್ಯಾಯಾಲಯ ಹೇಳಿತು.

ಆಗ ಅರ್ಜಿದಾರರ ಪರ ವಕೀಲರು ತನಿಖೆಗೆ ಕೋರಿರುವ ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು.

ಇದು ಭಯೋತ್ಪಾದನೆ ವಿರುದ್ದ ಹೋರಾಡಲು ಪ್ರತಿಯೊಬ್ಬ ಭಾರತೀಯನು ಕೈಜೋಡಿಸಿರುವ ಅತ್ಯಂತ ಮಹತ್ವದ ಸಂದರ್ಭವಾಗಿದೆ. ಹೀಗಾಗಿ, ಸೇನಾ ಪಡೆಗಳ ಸ್ಥೈರ್ಯ ಕುಂದಿಸಬಾರದು ಎಂದು ಪೀಠ ಕಿವಿಮಾತು ಹೇಳಿತು.

ಆಗ ಅರ್ಜಿದಾರರ ಪರ ವಕೀಲರು, "ಜಮ್ಮು ಮತ್ತು ಕಾಶ್ಮೀರದ ಹೊರಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಿಬೇಕು. ಏಕೆಂದರೆ, ಪಹಲ್ಗಾಮ್‌ ದಾಳಿಯ ನಂತರ ಹೊರಗಿರುವ ವಿದ್ಯಾರ್ಥಿಗಳು ದಾಳಿ ಎದುರಿಸುತ್ತಿದ್ದಾರೆ” ಎಂದರು.

“ನಿಮ್ಮ ಕೋರಿಕೆಯ ಬಗ್ಗೆ ನಿಮಗೆ ಸ್ಪಷ್ಟತೆ ಇದೆಯೇ. ಮೊದಲಿಗೆ ನೀವು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕಡೆಯಿಂದ ತನಿಖೆ ಕೋರಿದ್ದಿರಿ. ಅದನ್ನು ಅವರು ತನಿಖೆ ನಡೆಸಲಾಗದು. ಆನಂತರ ಮಾರ್ಗಸೂಚಿ, ಪರಿಹಾರ ಮತ್ತು ಪತ್ರಿಕಾ ಮಂಡಳಿಗೆ ನಿರ್ದೇಶನ ಕೋರಿದಿರಿ. ಇದೆಲ್ಲವನ್ನೂ ಓದಿದ ನಂತರ ಈಗ ನೀವು ವಿದ್ಯಾರ್ಥಿಗಳ ಪರವಾಗಿ ವಾದಿಸುತ್ತಿದ್ದೀರಿ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಂತಿಮವಾಗಿ ಅರ್ಜಿದಾರರು ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಇದಕ್ಕೆ ಅನುಮತಿಸಿದ ನ್ಯಾಯಾಲಯವು ವಿದ್ಯಾರ್ಥಿಗಳ ಎದುರಿಸುತ್ತಿರುವ ಸನ್ನಿವೇಶದ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಮೆಟ್ಟಿಲೇರಲು ಸೂಚಿಸಿತು.