ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಹುಬ್ಬಳ್ಳಿಯ ಇಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಆರು ವರ್ಷಗಳ ಕಠಿಣ ಶಿಕ್ಷೆಗೆ ಇಳಿಕೆ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ವಿಚಾರಣಾಧೀನ ನ್ಯಾಯಾಲಯದ ತೀರ್ಪಿನಲ್ಲಿ ಮಾರ್ಪಾಡು ಮಾಡಿದೆ. ಅಲ್ಲದೇ, 12.03.2020ರಿಂದ ಆರೋಪಿಗಳು ನ್ಯಾಯಾಂಗ ಬಂಧಲ್ಲಿರುವುದರಿಂದ ಈಗ ಆ ಅವಧಿಯು ಶಿಕ್ಷೆಯಿಂದ ಕಡಿತವಾಗಲಿದೆ. ಉಳಿದ ಅವಧಿಯನ್ನು ಅವರು ಜೈಲಿನಲ್ಲಿ ಕಳೆಯಬೇಕಿದೆ.
ಐಪಿಸಿ ಸೆಕ್ಷನ್ 302 ಅಡಿ ಜೀವಾವಧಿ ಶಿಕ್ಷೆ ವಿಧಿಸಲು ಪೂರಕ ದಾಖಲೆಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣ ಕುಮಾರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಐಪಿಸಿ ಸೆಕ್ಷನ್ 304 (ಅಪರಾಧಿಕ ನರಹತ್ಯೆ) ಅಡಿ ಕೃತ್ಯವು ಶಿಕ್ಷಾರ್ಹ ಎಂದಿದೆ.
ಆರೋಪಿಗಳಾದ ಶಂಶುದ್ದೀನ್ ಸವಣೂರು ಮತ್ತು ಜುಬೇರ್ ಅಹ್ಮದ್ ಅವರು ಫ್ಯಾಬ್ರಿಕೇಶನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 2020ರ ಮಾರ್ಚ್ 11ರಂದು ಮಧ್ಯಾಹ್ನ12 ಮತ್ತು 12.30ರ ನಡುವೆ ಪತಂಜಲಿ ಟೀ ಅಂಗಡಿಯ ಮುಂದೆ ಆರೋಪಿಗಳು ಶಹಬುದ್ದೀನ್ ಬಿಕಾನಬಾಯ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಕಲಹ ವಿಕೋಪಕ್ಕೆ ತಿರುಗಿ ಆರೋಪಿಗಳು ಶಹಬುದ್ದೀನ್‌ಗೆ ಚಾಕುವಿನಿಂದ ಇರಿದಿದ್ದರು. ಶಹಬುದ್ದೀನ್ ತಂದೆ ಮೆಹಬೂಬ್ ಸಾಬ್ ಇಬ್ರಾಹಿಂ ಬಿಕಾನಬಾಯ್ ಅವರ ನೀಡಿದ ದೂರಿನ ಮೇರೆಗೆ ಕಸಬಾಪೇಟೆ ಪೊಲೀಸರು ಕೊಲೆ ಅರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.
2022ರ ಮಾರ್ಚ್ 25ರಂದು ಸತ್ರ ನ್ಯಾಯಾಲಯವು ಸಂತ್ರಸ್ತನ ತಂದೆ, ಆತನ ಭಾವ ಹಾಗೂ ಸ್ವತಂತ್ರ ಸಾಕ್ಷಿಗಳ ಹೇಳಿಕೆ ಪರಿಗಣಿಸಿ ಇಬ್ಬರೂ ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 75,000 ರೂಪಾಯಿ ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು ಶಹಬುದ್ದೀನ್‌ಗೆ ಚಾಕುವಿನಿಂದ ಇರಿದಿರುವುದಕ್ಕೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. ಸಾಕ್ಷಿದಾರರ ಹೇಳಿಕೆಗಳು ಹೊಂದಿಕೆಯಾಗುತ್ತಿಲ್ಲ. ಇದನ್ನು ಪರಿಗಣಿಸದೇ ವಿಚಾರಣಾಧೀನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಾದಿಸಿದ್ದರು.
ಸಂತ್ರಸ್ತನ ಮೂರು ಸಂಬಂಧಿಗಳ ಜೊತೆ ಇಬ್ಬರು ಸ್ವತಂತ್ರ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಲಾಗಿದ್ದು, ಆರೋಪಿಗಳು ಸಂತ್ರಸ್ತನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಸಾಕ್ಷಿಗಳು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಐಪಿಸಿ ಸೆಕ್ಷನ್ 302 ಅಡಿ ಅಪರಾಧವಾಗಬೇಕಾದರೆ ಕೊಲೆ ಮಾಡುವ ಉದ್ದೇಶ, ಪೂರ್ವಸಿದ್ಧತೆಯ ಅಂಶಗಳಿರಬೇಕು ಎಂದು ವಿಭಾಗೀಯ ಪೀಠ ಹೇಳಿದೆ.
ಈ ನೆಲೆಯಲ್ಲಿ ಹಾಲಿ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಬೇಕಿದ್ದು, ಐಪಿಸಿ ಸೆಕ್ಷನ್ 302 ಗೆ ಬದಲಾಗಿ ಐಪಿಸಿ ಸೆಕ್ಷನ್ 304 (ಅಪರಾಧಿಕ ನರಹತ್ಯೆ) ಅಡಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟು, ಸಂತ್ರಸ್ತನ ತಂದೆ ಆರೋಪಿಗಳು ತಲಾ 25,000 ಸಾವಿರ ಪಾವತಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯದ ತೀರ್ಪಿನಲ್ಲಿ ಮಾರ್ಪಾಡು ಮಾಡಿದೆ.