Justice V Srishananda and Karnataka HC's Kalburgi Bench 
ಸುದ್ದಿಗಳು

ಪಾಕಿಸ್ತಾನ್‌ ಜಿಂದಾಬಾದ್‌ ಪೋಸ್ಟ್‌: ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

“ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ದೃಶ್ಯಗಳನ್ನು ಆರೋಪಿಯು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ಇತರೆ ಗೆಳೆಯರೊಂದಿಗೆ ಹಂಚಿಕೆ ಮಾಡಿದ್ದರು. ಆ ಕುರಿತು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Bar & Bench

ಫೇಸ್‌ಬುಕ್‌ ಪುಟದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವ ಸಂದೇಶ ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ರದ್ದುಗೊಳಿಸಿದೆ.

ಮಾನ್ವಿಯ ಕೆ ಎಂ ಭಾಷಾ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 505ರಡಿ ಸಂಜ್ಞೇಯ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದ ಮತ್ತು ಆರೋಪಪಟ್ಟಿ ಸಲ್ಲಿಸಿದ್ದ ಪ್ರಕ್ರಿಯೆಯನ್ನು ನ್ಯಾಯಾಲಯವು ರದ್ದುಗೊಳಿಸಿದೆ. “ಐಪಿಸಿ ಸೆಕ್ಷನ್ 505ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಸಂಜ್ಞೇಯ ತೆಗೆದುಕೊಳ್ಳುವ ಮೊದಲು ಅಪರಾಧ ದಂಡ ಸಂಹಿತೆ ಸೆಕ್ಷನ್ 196(1)(ಎ) ಅಡಿಯಲ್ಲಿ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಹೀಗಾಗಿ, ಪ್ರಕರಣ ರದ್ದುಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ನಿಯಮಾವಳಿ ಪ್ರಕಾರ ಅಂತಹ ಪೂರ್ವಾನುಮತಿ ಪಡೆಯುವ ಮುನ್ನ ಸಿಆರ್‌ಪಿಸಿ ಸೆಕ್ಷನ್ 196(3) ಅಡಿಯಲ್ಲಿ ಸೂಚಿಸಲಾಗಿರುವ ಸಕ್ಷಮ ಪ್ರಾಧಿಕಾರದ ವ್ಯಕ್ತಿ ಸೆಕ್ಷನ್ 505ರಡಿ ಹೊರಿಸಿರುವ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಬೇಕಿತ್ತು. ಇದನ್ನೂ ಮಾಡಿಲ್ಲ ಎಂದಿರುವ ಪೀಠವು ತನಿಖಾ ಸಂಸ್ಥೆ ಕಾನೂನು ಪ್ರಕಾರ ಆರೋಪದ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 196 ಅನ್ವಯ ಹೊಸದಾಗಿ ತನಿಖೆ ನಡೆಸಬಹುದು. ಅದಕ್ಕೆ ನ್ಯಾಯಾಲಯದ ಯಾವುದೇ ನಿರ್ಬಂಧವಿಲ್ಲ ಎಂದು ಆದೇಶಿಸಿದೆ.

ಹೊಸ ತನಿಖೆಯಲ್ಲಿ ಆರೋಪಗಳನ್ನು ಪುಷ್ಟೀಕರಿಸುವ ಸಾಕಷ್ಟು ದಾಖಲೆಗಳು ದೊರತೆರೆ, ತನಿಖಾ ಸಂಸ್ಥೆ ಕಾನೂನು ಪ್ರಕಾರ ಅಗತ್ಯ ಆರೋಪ ಪಟ್ಟಿ ಸಲ್ಲಿಸಲು ಮತ್ತು ಕಾನೂನು ಪ್ರಕ್ರಿಯೆ ಮುಂದುವರಿಸಲು ಎಲ್ಲ ರೀತಿಯ ಸ್ವಾತಂತ್ರ್ಯ ಹೊಂದಿದೆ ಎಂದೂ ಪೀಠ ಹೇಳಿದೆ.

ಪ್ರಕರಣದ ವಿವರ: ಅರ್ಜಿದಾರರು ಅಕ್ಟೋಬರ್ 2020ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪಾಕಿಸ್ತಾನದ ಯೋಧನೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಾ “ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ದೃಶ್ಯಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಅದನ್ನು ಇತರೆ ಗೆಳೆಯರೊಂದಿಗೆ ಹಂಚಿಕೆ ಮಾಡಿದ್ದರು. ಆ ಕುರಿತು ಮಾಹಿತಿ ಸ್ವೀಕರಿಸಿದ ಮಾನ್ವಿ ಪೊಲೀಸ್ ಇನ್ಸ್‌ಪೆಕ್ಟರ್ ಅವರು ತಹಸೀಲ್ದಾರ್‌ ಕಚೇರಿಗೆ ಹೋಗಿ, ಅಲ್ಲಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದರು. ಆತ ತನ್ನ ಹೆಸರು ಭಾಷಾ ಎಂದು ಹೇಳಿ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್ ಪೋಸ್ಟ್ ಹಂಚಿಕೊಂಡಿರುವುದನ್ನು ಒಪ್ಪಿಕೊಂಡಿದ್ದರು. ನಂತರ ಪೊಲೀಸರು, ಇಂತಹ ಪೋಸ್ಟ್‌ ಹಾಕುವ ಮೂಲಕ ದೇಶದ ಯೋಧರಿಗೆ ಅಗೌರವ ತೋರಲಾಗಿದೆ ಎಂದು ಪ್ರಕರಣ ದಾಖಲಿಸಿದ್ದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಹೇಳಲಾಗಿತ್ತು. ಪೊಲೀಸರು ತನಿಖೆ ನಂತರ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ರದ್ದುಪಡಿಸಿದೆ.