ಸುದ್ದಿಗಳು

ಪಂಡರಾಪುರ ಯಾತ್ರೆಗೆ ಅವಕಾಶ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Bar & Bench

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಡರಾಪುರದ ವಿಠ್ಠಲ ದೇವಸ್ಥಾನದ ವಾರ್ಷಿಕ ತೀರ್ಥಯಾತ್ರೆಗೆ (ಪಂಡರಾಪುರ ವಾರಿ) ಮಹಾರಾಷ್ಟ್ರ ಸರ್ಕಾರ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಜಾಗೊಳಿಸಿತು.

ಸರ್ಕಾರೇತರ ಸಂಸ್ಥೆ ಸಂತ ನಾಮದೇವ್ ಮಹಾರಾಜ್ ಸಂಸ್ಥಾನ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಲು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರಿದ್ದ ಪೀಠ ನಿರಾಕರಿಸಿತು.

ಕೋವಿಡ್‌ ಡೆಲ್ಟಾ ಪ್ಲಸ್‌ ರೂಪಾಂತರಿ ಸೋಂಕು ಹರಡುವ ಹಿನ್ನೆಲೆಯಲ್ಲಿ ಡಿಂಡಿ ಆಚರಣೆಗಾಗಿ ಕೇವಲ ಹತ್ತು ಪಾಲ್ಕಿಗಳಿಗೆ (ಪಲ್ಲಕ್ಕಿ) ಮಾತ್ರ ಅವಕಾಶ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು.

ಯಾತ್ರೆಯಲ್ಲಿ 250ಕ್ಕೂ ಹೆಚ್ಚು ಪಲ್ಲಕ್ಕಿಗಳನ್ನು ನೋಂದಾಯಿಸಲಾಗಿದ್ದರೂ ಕೇವಲ ಹತ್ತು ಪಲ್ಲಕ್ಕಿಗಳಿಗೆ ಮಾತ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಿಂದ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ಗೋವಾ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣದ ವಾರಕಾರಿಗಳು (ಯಾತ್ರಿಕರು) ತಮ್ಮ ಮನೆಯಿಂದ ಪಂಡರಾಪುರದ ವಿಠ್ಠಲ ದೇವಸ್ಥಾನದರವರೆಗೆ ನಡೆಸುವ ಯಾತ್ರೆ ಸಂಪನ್ನಗೊಳಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದು ಅರ್ಜಿದಾರರು ತಿಳಿಸಿದ್ದರು.

ರೂಢಿಗತ ಪರಂಪರೆಯನ್ನು ಮುಂದುವರೆಸಲು ಮಹಾರಾಷ್ಟ್ರ ಸರ್ಕಾರ ನಿರಾಕರಿಸಿದ್ದು ಲಕ್ಷಾಂತರ ವಾರಕಾರಿಗಳು ಮತ್ತು 250ಕ್ಕೂ ಹೆಚ್ಚು ಪಲ್ಲಕ್ಕಿಗಳಿಗೆ ಅನುಮತಿ ನೀಡದೇ ನಿರ್ಧಾರ ಸಮಾನತೆ ಮತ್ತು ನಂಬಿಕೆಗೆ ಸಂಬಂಧಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಕಳೆದ ವರ್ಷ ವಾರಕಾರಿಗಳು ಯಾತ್ರೆಗೆ ಒತ್ತಾಯಿಸಿರಲಿಲ್ಲ. ಹಾಗಾಗಿ ಈ ವರ್ಷವಾದರೂ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಕೋರಿತ್ತು.

ಎಲ್ಲಾ ವಾರಕಾರಿಗಳು ತಮ್ಮ ಮನೆಗಳಿಂದ ಕಾಲ್ನಡಿಗೆಯಲ್ಲಿ ವಿಠ್ಠಲ ದೇಗುಲಕ್ಕೆ ಯಾತ್ರೆ ನಡೆಸಲು ಅವಕಾಶ ಮಾಡಿಕೊಡಬೇಕು. ವಾರಕಾರಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಅಂತರರಾಜ್ಯ ಬಸ್‌ ಸೇವೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಅಲ್ಲದೆ ದೇಶದೆಲ್ಲೆಡೆಯಿಂದ ಬರುವ ಪಲ್ಲಕ್ಕಿಗಳಿಗೆ ಅವಕಾಶ ನೀಡಬೇಕು ಮತ್ತು ಅವುಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ಹೇರಬಾರದು ಎಂದು ಸೂಚಿಸುವಂತೆ ಮನವಿಯಲ್ಲಿ ಕೋರಲಾಗಿತ್ತು.