ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮ ಪ್ರತಿಮೆಯನ್ನು ಮರು ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯೊಬ್ಬರಿಗೆ ₹5 ಲಕ್ಷ ಠೇವಣಿ ಇರಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಪರಶುರಾಮ ಪ್ರತಿಮೆಯನ್ನು ಮರು ನಿರ್ಮಿಸಲು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಉಡುಪಿಯ ಉದಯ ಶೆಟ್ಟಿ ಮುನಿಯಾಳ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರತಿಮೆ ನಿರ್ಮಾಣಕ್ಕೆ ಅರ್ಜಿದಾರರು ತಮ್ಮ ವೈಯುಕ್ತಿಕ ಕಾಣಿಕೆಯಾಗಿ ₹5 ಲಕ್ಷ ನೀಡಬೇಕು. ಈ ಮೊತ್ತವನ್ನು ಎರಡು ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿ ಇಡಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ಹಿಂದೂ ನಂಬಿಕೆಯ ಪ್ರಕಾರ ಪರಶುರಾಮನನ್ನು ತುಳುನಾಡು ಹಾಗೂ ಕರಾವಳಿ ಪ್ರದೇಶದ ಸೃಷ್ಟಿಕರ್ತ ಎಂದು ಭಾವಿಸಲಾಗಿದೆ. ಭಗವಾನ್ ಪರಶುರಾಮನ ಬಗ್ಗೆ ಕರಾವಳಿ ಕರ್ನಾಟಕದ ಲಕ್ಷಾಂತರ ಹಿಂದುಗಳಿಗೆ ಅಪಾರ ಭಕ್ತಿ ಇದೆ. ಪ್ರತಿಮೆ ನಿರ್ಮಾಣ ಆಗದಿದ್ದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಆದ್ದರಿಂದ, ಪರಶುರಾಮ ಪ್ರತಿಮೆಯನ್ನು ಮರುನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು” ಎಂದು ಕೋರಿದರು.
ವಾದ ಆಲಿಸಿದ ಪೀಠವು ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುತ್ತಿದ್ದೀರಿ. ಪ್ರತಿಮೆ ನಿರ್ಮಾಣಕ್ಕೆ ನಿಮ್ಮ ವೈಯಕ್ತಿಕ ಕಾಣಿಕೆ ಏನು ಎಂದು ಪ್ರಶ್ನಿಸಿತಲ್ಲದೆ, ನೀವು ₹5 ಲಕ್ಷ ಠೇವಣಿ ಇಡುವಿರೇ ಎಂದು ಪ್ರಶ್ನಿಸಿತು. ಅರ್ಜಿದಾರರು ವಕೀಲರು ಅದಕ್ಕೆ ಸಮ್ಮತಿ ಸೂಚಿಸಿದರು.
ಆಗ ಪೀಠವು ನಿಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ. ನಿಮ್ಮ ಹೇಳಿಕೆಗೆ ಬದ್ಧರಾಗಿರಬೇಕು ಎಂದು ತಿಳಿಸಿತಲ್ಲದೆ, ಮುಂದಿನ ಎರಡು ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ₹5 ಲಕ್ಷ ಠೇವಣಿ ಇಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.
ಕಾರ್ಕಳದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಅನ್ನು 2023ರ ಜನವರಿ 27ರಂದು ಉದ್ಘಾಟಿಸಲಾಗಿದ್ದು, ಅಲ್ಲಿ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯನ್ನೂ ಲೋಕಾರ್ಪಣೆಗೊಳಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಧಿಕಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾರ್ವಜನಿಕ ಹಣ ವಿನಿಯೋಗಿಸಿ ಪ್ರತಿಮೆ ನಿರ್ಮಿಸಲಾಗಿತ್ತು. ಆದರೆ, ಪ್ರತಿಮೆಯನ್ನು ಒಪ್ಪಂದದಂತೆ ಕಂಚಿನಿಂದ ನಿರ್ಮಿಸುವ ಬದಲಿಗೆ ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸಾರ್ವಜನಿಕ ಸುರಕ್ಷತೆಗೆ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ 2023ರ ಅಕ್ಟೋಬರ್ 12ರಂದು ಪ್ರತಿಮೆಯ ಮೇಲ್ಭಾಗವನ್ನು ತೆರವುಗೊಳಿಸಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ, ಥೀಮ್ ಪಾರ್ಕ್ ಅಪೂರ್ಣಗೊಂಡಂತಾಗಿದ್ದು, ಭಕ್ತಾದಿಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರತಿಮೆ ತಯಾರಿಸಿದ್ದ ಶಿಲ್ಪಿ ಕೃಷ್ಣ ನಾಯ್ಕ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ರದ್ದುಕೋರಿ ಕೃಷ್ಣ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2024ರ ಅಕ್ಟೋಬರ್ 21ರಂದು ವಜಾಗೊಳಿಸಿತ್ತು. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, 1,231 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರ ನಡುವೆ, ಪ್ರತಿಮೆಯ ಮರುನಿರ್ಮಾಣ ಹಾಗೂ ಮರುಸ್ಥಾಪನೆಗೆ ಪ್ರವಾಸೋದ್ಯಮ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂ ಶಾಸ್ತ್ರಗಳು ಮತ್ತು ಸ್ಮೃತಿಗಳ ಪ್ರಕಾರ ಅಪೂರ್ಣವಾದ ಅಥವಾ ಕೆಡವಲಾದ ಪ್ರತಿಮೆಯನ್ನು ಪೂಜಿಸಬಾರದು. ಪ್ರತಿಮೆಯನ್ನು ಅಪವಿತ್ರಗೊಳಿಸುವುದರಿಂದ ಆ ಭಾಗದ ಆಡಳಿತಗಾರರು ಹಾಗೂ ಜನರಿಗೆ ದುರದೃಷ್ಟ ತರುತ್ತದೆ ಎಂಬ ನಂಬಿಕೆ ಇದೆ. ಪರಶುರಾಮ ಪ್ರತಿಮೆ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ