ತಮ್ಮ ಪೋಷಕರು ಸಿರಿವಂತರಾಗಿರಲಿಲ್ಲ. ಆದರೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ತ್ಯಾಗ ಮಾಡಿದರು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಬಾಂಬೆ ಹೈಕೋರ್ಟ್ ಶನಿವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ನನ್ನ ಹೆತ್ತವರ ತ್ಯಾಗದಿಂದಾಗಿ ನಾನು ಇಲ್ಲಿದ್ದೇನೆ ಎಂದು ಹೇಳುವ ಮೂಲಕ ಮಾತುಗಳನ್ನಾರಂಭಿಸಬೇಕಿದೆ. ಅವರು ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. ನಮ್ಮಲ್ಲಿ ಸ್ವಲ್ಪ ಜಮೀನು ಇತ್ತು. ಕೃಷಿ ಸುಧಾರಣಾ ಕಾಯ್ದೆಯಡಿ ಅದನ್ನು ಕಳೆದುಕೊಂಡೆವು. ಉಳುಮೆ ಮಾಡುತ್ತಿದ್ದವರು ಮಣ್ಣಿನ ಮಕ್ಕಳಾಗಿದ್ದು ಅವರ ವಿರುದ್ಧ ದಾವೆ ಹೂಡದಿರಲು ನನ್ನಜ್ಜ ತೀರ್ಮಾನಿಸಿದರು. ಹೀಗಾಗಿ ಕುಟುಂಬ ಸ್ಥಳಾಂತರಗೊಂಡು ಪರ್ಯಾಯ ಮಾರ್ಗಗಳನ್ನು ಹುಡುಕಲು ಮುಂದಾಯಿತು” ಎಂದರು.
ಸಿಜೆಐ ಚಂದ್ರಚೂಡ್ ಅವರ ತಂದೆ, ನ್ಯಾ. ವೈ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಯೇ ಅತಿ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರು.
ಸಣ್ಣ ಚಾಳ್‌ನಲ್ಲಿ (ಪಶ್ಚಿಮ ಭಾರತದಲ್ಲಿ ಕಾಣಸಿಗುವ ವಠಾರದ ಮನೆಗಳು) ನಮ್ಮ ತಂದೆ ತಾಯಿ ವಾಸಿಸುತ್ತಿದ್ದರು. ನನ್ನ ತಾಯಿ ಬಟ್ಟೆ ಒಗೆಯಲು ಹತ್ತಿರದ ನೀರಿನಸೆಲೆಗೆ ಬಟ್ಟೆಗಳನ್ನು ಹೊತ್ತೊಯ್ಯುತ್ತಿದ್ದರು. ಸಂಬಂಧಿಕರು ಮನೆಗೆ ಬರುತ್ತಿದ್ದರು. ನಮ್ಮ ತಂದೆ ವಕೀಲರಾದ ಬಳಿಕ ಬೆಳಗ್ಗೆ 5 ಗಂಟೆಗೆ ಕಕ್ಷೀದಾರರು ಭೇಟಿ ಕೊಡುತ್ತಿದ್ದರು.
ನನ್ನನ್ನೂ ನನ್ನ ಸಹೋದರಿಯನ್ನೂ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸುವ ದೂರದೃಷ್ಟಿ ನನ್ನ ಪೋಷಕರಿಗಿತ್ತು. ನನ್ನ ತಂದೆ 7ನೇ ತರಗತಿ ಬಳಿಕವಷ್ಟೇ ಇಂಗ್ಲಿಷ್ ಓದಲು ಕಲಿತವರು. ನಾವು ಪಡೆದ ರೀತಿಯ ವಿದೇಶಿ ಶಿಕ್ಷಣ ಅವರಿಗೆ ದೊರೆಯಲಿಲ್ಲ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡದಿರುವ ನ್ಯಾ. ಚಂದ್ರಚೂಡ್ ತಿಳಿಸಿದರು.
"ನನ್ನ ತಂದೆ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ, ನಾನು ಕಾನೂನು ಪದವಿ ಗಳಿಸಿದ ಬಳಿಕ ಅವರು “ನಾನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವವರೆಗೆ ನಿನ್ನನ್ನು ಪ್ರಾಕ್ಟೀಸ್ ಮಾಡಲು ಬಿಡುವುದಿಲ್ಲ” ಎಂದಿದ್ದರು. ನನಗೆ ಅದು ಇಷ್ಟವಿತ್ತೋ ಇಲ್ಲವೋ, ಆದರೆ ಅದನ್ನು ಪಾಲಿಸಬೇಕಿತ್ತು. ನಾವು ಅಂತಹ ಮೌಲ್ಯಗಳೊಂದಿಗೆ ಬೆಳೆದೆವು… ನನ್ನ ತಂದೆ ನಿವೃತ್ತರಾದ ಬಳಿಕವೇ ನಾನು ಪ್ರಾಕ್ಟೀಸ್ ಆರಂಭಿಸಿದೆ. ನನ್ನ ತಂದೆಗೆ “ಅವರಿಗೆ ತುಂಬಾ ಒಳ್ಳೆಯ ಹೆಸರಿತ್ತು. (ನಾನು) ಮತ್ತಷ್ಟು ಹೆಸರುಗಳಿಸಬೇಕಾಗಿತ್ತು ಅಥವಾ ಇರುವುದನ್ನು ಕಳೆದುಕೊಳ್ಳಬೇಕಿತ್ತು” ಎಂದು ಅವರು ಹೇಳಿದರು.
ತನ್ನ ಗಂಡ ಬೇರೊಂದು ಮದುವೆಯಾದ ಬಳಿಕ ತಮ್ಮ ಅಜ್ಜಿ ಒಂಬತ್ತು ಮಕ್ಕಳನ್ನು ಸಾಕಿದ ಬಗೆಯನ್ನು ಅವರು ವಿವರಿಸಿದರು. ಒಡವೆ ಅಡ ಇಟ್ಟು ಮಕ್ಕಳಿಗೆ ಹೊಸ ಜೀವನಕ್ರಮವನ್ನು ರೂಪಿಸಲು ಪುಣೆಗೆ ಅವರನ್ನು ಕರೆತಂದಳು. ಹಾಗೆ ಒಡವೆ ಅಡ ಇಟ್ಟ ಆ ಹೆಣ್ಣುಮಗಳ ಬಲದಿಂದಾಗಿ ನಮ್ಮ ಕುಟುಂಬದಲ್ಲೊಬ್ಬರು ವೈದ್ಯರಾದರು. ನನ್ನ ತಂದೆಯ ಚಿಕ್ಕಪ್ಪ ವಕೀಲರಾದರು. ಹೀಗೆ ನನ್ನ ಕುಟುಂಬ ಭೂ ಪರಂಪರೆಯಿಂದ ಬೌದ್ಧಿಕ ಪರಂಪರೆಗೆ ಹೊರಳಿತು” ಎಂದರು.
ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಓಕಾ ಹಾಗೂ ಬಾಂಬೆ ಹೈಕೋರ್ಟ್‌ನ ನಿಕಟ ಪೂರ್ವ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ದೀಪಂಕರ್ ದತ್ತಾ ಮತ್ತಿತರರು ಭಾಗವಹಿಸಿದ್ದರು.