Paresh Mesta and CBI 
ಸುದ್ದಿಗಳು

[ಪರೇಶ್‌ ಮೇಸ್ತಾ ಪ್ರಕರಣ] ನೀರಿನಲ್ಲಿ ಮುಳುಗಿ ಸಾವು; ಹೊನ್ನಾವರ ನ್ಯಾಯಾಲಯಕ್ಕೆ ʼಬಿʼ ರಿಪೋರ್ಟ್‌ ಸಲ್ಲಿಸಿದ ಸಿಬಿಐ

18 ವರ್ಷದ ಪರೇಶ್‌ ಮೇಸ್ತಾನನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಶೆಟ್ಟಿಕೆರೆಗೆ ಎಸೆದಿದ್ದರು ಎಂದು ಪರೇಶ್‌ ತಂದೆ ಕಮಲಾಕರ್ ಮೇಸ್ತಾ 2017ರ ಡಿಸೆಂಬರ್‌ 8ರಂದು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು.

Bar & Bench

ದೇಶದ ಗಮನಸೆಳೆದಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೀನುಗಾರ ಯುವಕ ಪರೇಶ್‌ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಸೋಮವಾರ ಹೊನ್ನಾವರದ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ʼಬಿʼ ರಿಪೋರ್ಟ್‌ ಸಲ್ಲಿಸಿದೆ.

ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಪಾತ್ರದ ಕುರಿತು ಯಾವುದೇ ಸಾಕ್ಷ್ಯ ದೊರೆತಿಲ್ಲ. ಮರಣಪೂರ್ವದಲ್ಲಿ ನೀರಿನಲ್ಲಿ ಮುಳುಗಿರುವುದರಿಂದ (ಆಂಟಿ ಮೋರ್ಟೆಮ್‌ ಡ್ರೌನಿಂಗ್) ಮೇಸ್ತಾ ಸಾವನ್ನಪ್ಪಿರುವುದು ವೈದ್ಯಕೀಯ-ಕಾನೂನು ಸಾಕ್ಷ್ಯ/ಅಭಿಪ್ರಾಯಗಳಿಂದ ದೃಢಪಟ್ಟಿದೆ. ಹೀಗಾಗಿ, ಹೊನ್ನಾವರದ ಪ್ರಧಾನ ಸಿವಿಲ್‌ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿಗೆ ಅಂತಿಮ/ಮುಕ್ತಾಯ ವರದಿ ಸಲ್ಲಿಸಲಾಗುತ್ತಿದೆ ಎಂದು ಮೇಸ್ತಾ ತಂದೆ ಕಮಲಾಕರ್‌ ಮೇಸ್ತಾಗೆ ಸಿಬಿಐ ವಿಶೇಷ ಅಪರಾಧ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ದಿಲೀಪ್‌ ಕುಮಾರ್‌ ಪಿ ಎಸ್‌ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

2017ರ ಡಿಸೆಂಬರ್‌ 6ರಂದು ಹೊನ್ನಾವರದ ಬಸ್‌ ನಿಲ್ದಾಣದ ಎದುರಿಗಿನ ಗುಡ್‌ಲಕ್‌ ಹೋಟೆಲ್‌ ಸಮೀಪ ಸಮಾನ ಉದ್ದೇಶದಿಂದ ನೆರೆದಿದ್ದ ಮುಸ್ಲಿಮ್‌ ಸಮುದಾಯದ ಗುಂಪೊಂದು ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದ್ದು, ಮಾರಕಾಸ್ತ್ರಗಳಿಂದ ದೇವಸ್ಥಾನ, ಅಂಗಡಿ-ಮುಂಗಟ್ಟು, ವಾಹನಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ತನ್ನ ಪುತ್ರ 18 ವರ್ಷದ ಪರೇಶ್‌ ಮೇಸ್ತಾನನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಶೆಟ್ಟಿಕೆರೆಗೆ ಎಸೆದಿದ್ದರು ಎಂದು ಪರೇಶ್‌ ತಂದೆ ಕಮಲಾಕರ್ ಮೇಸ್ತಾ 2017ರ ಡಿಸೆಂಬರ್‌ 8ರಂದು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು.

ಇದರ ಅನ್ವಯ ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 143, 147, 148, 302, 201 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು. ಸಾಕಷ್ಟು ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದ ಈ ಪ್ರಕರಣವನ್ನು 2017ರ ಡಿಸೆಂಬರ್‌ 13ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ವಹಿಸಿತ್ತು. ಕೋಮು ದ್ವೇಷಕ್ಕೆ ಪ್ರತಿಯಾಗಿ ಮೇಸ್ತಾನನ್ನು ಕೊಲೆ ಮಾಡಲಾಗಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.