ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2024 ಅನ್ನು ಲೋಕಸಭೆ ಗುರುವಾರ ಅಂಗೀಕರಿಸಿದೆ.
ಈ ಮಸೂದೆಯನ್ನು ಫೆಬ್ರವರಿ 5 ರಂದು ರಾಜ್ಯಸಭೆಯಲ್ಲಿ ಮಂಡಿಸಿ, ಮರುದಿನ ಅಂಗೀಕರಿಸಲಾಗಿತ್ತು.
ಈ ಮಸೂದೆಯು ಮಾನವರಿಗೆ ಅಥವಾ ಪರಿಸರಕ್ಕೆ ಗಮನಾರ್ಹ ಹಾನಿಯನ್ನುಂಟು ಮಾಡದ ಸಣ್ಣ ಮಟ್ಟದ, ತಾಂತ್ರಿಕ ಅಥವಾ ಪ್ರಕ್ರಿಯಾತ್ಮಕ ಲೋಪಗಳಿಗೆ ಕ್ರಿಮಿನಲ್ ದಂಡ ವಿಧಿಸುವ ವಿಚಾರದಲ್ಲಿ ಸುಧಾರಣೆಯನ್ನು ತರಲ ಪ್ರಯತ್ನಿಸುತ್ತದೆ.
ಇದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರ ನಾಮನಿರ್ದೇಶನದ ವಿಧಾನವನ್ನು ಸೂಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ, ಕೆಲವು ಕೈಗಾರಿಕಾ ಸ್ಥಾವರಗಳಿಗೆ ನಿರ್ದಿಷ್ಟ ನಿಯಮಗಳಿಂದ ವಿನಾಯಿತಿಗಳನ್ನು ಒದಗಿಸುತ್ತದೆ. ಅಲ್ಲದೆ, ಮಸೂದೆಯು ವಿವಿಧ ಕೈಗಾರಿಕಾ ಕಾರ್ಯಾಚರಣೆಗಳಿಗೆ ಅನುದಾನ, ನಿರಾಕರಣೆ ಅಥವಾ ಸಮ್ಮತಿಯನ್ನು ರದ್ದುಗೊಳಿಸಲು ಮಾರ್ಗಸೂಚಿಗಳನ್ನು ಒಳಗೊಂಡಿದೆ.
ಗಮನಾರ್ಹ ಬದಲಾವಣೆಯೆಂದರೆ ಸಣ್ಣ ಅಪರಾಧಗಳನ್ನು ನಿರಪರಾಧೀಕರಣಗೊಳಿಸಿರುವುದು. ಇದು ಜೈಲು ಶಿಕ್ಷೆಯ ಬದಲಾಗಿ ಹಣಕಾಸಿನ ದಂಡ ವಿಧಿಸಲು ಅನುವು ಮಾಡುತ್ತದೆ. ದಂಡದ ನಿರ್ಣಯವನ್ನು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಅಥವಾ ರಾಜ್ಯ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಗಿಂತ ಕಡಿಮೆಯಿಲ್ಲದ ನಿಯೋಜಿತ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.
ಇದಲ್ಲದೆ, ಪರಿಸರ (ತಿದ್ದುಪಡಿ) ಕಾಯಿದೆ, 1986ರ ನಿಯಮಗಳ ಅನುಪಾಲನೆ ಮಾಡದ ಹೊಸ ಮಳಿಗೆಗಳು, ಕೊಳಚೆ ನೀರು ಹಾಗೂ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದ ಲೋಪಗಳಿಗೆ ಕಟ್ಟುನಿಟ್ಟಿನ ದಂಡಗಳನ್ನು ಮಸೂದೆಯು ಪರಿಚಯಿಸುತ್ತದೆ.
[ರಾಜ್ಯಸಭೆಯಲ್ಲಿ ಅಂಗೀಕಾರವಾದ ಮಸೂದೆ ಓದಿ]