ಸಂಸತ್ತಿನ ಭದ್ರತಾ ಉಲ್ಲಂಘನೆ 
ಸುದ್ದಿಗಳು

[ಸಂಸತ್‌ ಭದ್ರತಾ ಲೋಪ] ಪ್ರಧಾನಿ ಮೋದಿ ಘೋಷಿತ ಅಪರಾಧಿ ಎಂದು ಆರೋಪಿಗಳು ಹೇಳಿದ್ದಾರೆ: ದೆಹಲಿ ಪೊಲೀಸರು

Bar & Bench

ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ನಿಯಂತ್ರಣ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವ ನಾಲ್ವರು ಆರೋಪಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು 'ಘೋಷಿತ ಅಪರಾಧಿ' ಎಂದು ಸಾರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಾಕಿದ್ದರು ಎಂದು ದೆಹಲಿ ಪೊಲೀಸರು ಗುರುವಾರ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಅತುಲ್ ಶ್ರೀವಾಸ್ತವ ಅವರು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಗಳು ಹಂಚಿಕೊಂಡಿರುವ ಕೆಲವು ಪೋಸ್ಟ್‌ಗಳು ಮತ್ತು ಆರೋಪಿಗಳು ಸಿದ್ಧಪಡಿಸಿದ ಕರಪತ್ರಗಳನ್ನು ಉಲ್ಲೇಖಿಸಿದರು, ಅದರಲ್ಲಿ ಪ್ರಧಾನಿ ಮೋದಿಯವರನ್ನು 'ಕಾಣೆಯಾದ' ವ್ಯಕ್ತಿ ಎಂದು ಹೆಸರಿಸಿ ಮತ್ತು ಅವರನ್ನು ಪತ್ತೆಹಚ್ಚುವವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ಇರುವುದಾಗಿ ಘೋಷಿಸಿದ್ದರು.

"ಅವರನ್ನು (ಮೋದಿ) ಘೋಷಿತ ಅಪರಾಧಿಯಂತೆ ತೋರಿಸಲಾಗಿದೆ" ಎಂದು ಎಪಿಪಿ ಹೇಳಿದರು.

ಪೊಲೀಸರು ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ನಾಲ್ವರು ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಆರೋಪಿಗಳನ್ನು ಪ್ರತಿನಿಧಿಸುವವರು ಇಲ್ಲದ ಕಾರಣ, ಅವರಿಗೆ ಕಾನೂನು ನೆರವಿಗೆ ವಕೀಲರನ್ನು ನೀಡಲಾಯಿತು.

ಬುಧವಾರ ಲೋಕಸಭೆಯ ಕಲಾಪದ ವೇಳೆ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸಂದರ್ಶಕರ ಗ್ಯಾಲರಿಯಿಂದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳೊಂದಿಗೆ (ಕ್ಯಾನಿಸ್ಟರ್‌) ಸಂಸತ್‌ ಹಾಲ್‌ಗೆ ಜಿಗಿದಿದ್ದರು. ಇಬ್ಬರನ್ನೂ ಕೆಲ ಕ್ಷಣದಲ್ಲಿಯೇ ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಇದೇ ವೇಳೆ, ಸಂಸತ್ತಿನ ಹೊರಗೆ ಹಳದಿ ಹೊಗೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಅಮೋಲ್ ಶಿಂಧೆ ಮತ್ತು ನೀಲಂ ಎಂಬ ಇನ್ನಿಬ್ಬರನ್ನು ಬಂಧಿಸಲಾಗಿತ್ತು.

ಸಂಸತ್ತಿನ ಭದ್ರತಾ ಉಪ ನಿರ್ದೇಶಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎಪಿಪಿ ಶ್ರೀವಾಸ್ತವ ಗುರುವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಂಸತ್ತಿನ ಕಟ್ಟಡದೊಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಸಾಗಿಸಲು ಆರೋಪಿಗಳು ತಮ್ಮ ಬೂಟುಗಳಲ್ಲಿ ಕುಳಿಯನ್ನು ರಚಿಸಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಲ್ವರು ಆರೋಪಿಗಳನ್ನು 15 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿದರು. ತಮ್ಮ ಪ್ರಕರಣವನ್ನು ಬೆಂಬಲಿಸಲು, ಎಪಿಪಿ ಶ್ರೀವಾಸ್ತವ ಆರೋಪಿಗಳು ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಉಲ್ಲೇಖಿಸಿದರು.

ಇದಲ್ಲದೆ, ಆರೋಪಿಗಳು 'ಭಗತ್ ಸಿಂಗ್ ಫ್ಯಾನ್ ಕ್ಲಬ್' ಎಂಬ ಗುಂಪನ್ನು ರಚಿಸಿದ್ದಾರೆ ಮತ್ತು ಅವರು ಲಕ್ನೋದಿಂದ ಶೂಗಳನ್ನು ಮತ್ತು ಮುಂಬೈನಿಂದ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಖರೀದಿಸಿದ್ದಾರೆ ಎಂದು ಎಪಿಪಿ ಒತ್ತಿಹೇಳಿದೆ.

ತನಿಖೆಗಾಗಿ ಆರೋಪಿಗಳನ್ನು ಮುಂಬೈ ಮತ್ತು ಲಕ್ನೋಗೆ ಕರೆದೊಯ್ಯುವ ಸಲುವಾಗಿ, ಪ್ರಾಸಿಕ್ಯೂಷನ್ ರಿಮಾಂಡ್‌ಗೆ ನೀಡುವಂತೆ ಕೋರಿತು.

ಈ ಪ್ರಕ್ರಿಯೆಯನ್ನು ಕೈಗೊಳ್ಳಲು ನಾಲ್ಕು ಅಥವಾ ಐದು ದಿನಗಳು ಸಾಕು ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.