Parliament Security Breach 
ಸುದ್ದಿಗಳು

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ: ಬಂಧನದಿಂದ ಬಿಡುಗಡೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನೀಲಂ ಆಜಾದ್

Bar & Bench

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಆರೋಪಿ ನೀಲಂ ಆಜಾದ್ ಅವರು ಪೊಲೀಸ್ ಕಸ್ಟಡಿಯಿಂದ ತಕ್ಷಣ ಬಿಡುಗಡೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ತನ್ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಡಿಸೆಂಬರ್ 21ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದ ಕಾನೂನುಬದ್ಧತೆಯನ್ನು ಆಜಾದ್ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಪೊಲೀಸ್‌ ವಶಕ್ಕೆ ನೀಡುವ ಪ್ರಕ್ರಿಯೆಯ ವೇಳೆ ತನ್ನ ಪರವಾಗಿ ವಾದಿಸಲು ತನ್ನ ಆಯ್ಕೆಯ ವಕೀಲರನ್ನು ಸಂಪರ್ಕಿಸಲು ತನಗೆ ಅವಕಾಶ ನೀಡಿಲ್ಲ ಎಂದು ಅವರು ದೂರಿದ್ದಾರೆ. "ವಾಸ್ತವದಲ್ಲಿ, ರಿಮಾಂಡ್ ಅರ್ಜಿಯನ್ನು ವಿಲೇವಾರಿ ಮಾಡಿದ ನಂತರವೇ ನ್ಯಾಯಾಲಯವು ನಿಮ್ಮನ್ನು ಪ್ರತಿನಿಧಿಸಲು ನಿಮ್ಮ ಆಯ್ಕೆಯ ವಕೀಲರನ್ನು ಬಯಸುತ್ತೀರಾ ಎಂದು ಕೇಳಿತು, ಅದಕ್ಕೆ ತಾನು ಹೌದು ಎಂದು ಉತ್ತರಿಸಿದೆ. ಆನಂತರ ತನ್ನ ವಕೀಲರನ್ನು ಸಂಪರ್ಕಿಸಲು ಅನುಮತಿ ನೀಡುವ ಆದೇಶವನ್ನು ಹೊರಡಿಸಲಾಯಿತು" ಎಂದು ನೀಲಂ ತನ್ನ ಮನವಿಯಲ್ಲಿ ತಿಳಿಸಿದ್ದಾರೆ.

29 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಕಳೆದ ನಂತರ ಡಿಸೆಂಬರ್ 14ರಂದು ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

"ಪ್ರತಿವಾದಿ (ದೆಹಲಿ ಪೊಲೀಸರು) ಆಕೆಯ ಆಯ್ಕೆಯ ವಕೀಲರನ್ನು ಸಂಪರ್ಕಿಸಲು ಆಕೆಗೆ ಅನುಮತಿ ನೀಡಿಲ್ಲ. ಬದಲಿಗೆ ನ್ಯಾಯಾಲಯಕ್ಕೆ ಆಗಮಿಸಿದ ನಂತರ, ಆಕೆಯ ವಕೀಲರು ಇಲ್ಲದೆ ಇದ್ದುದರಿಂದ ನ್ಯಾಯಾಲಯದಲ್ಲಿ ಇದಾಗಲೇ ಹಾಜರಿದ್ದ ಡಿಎಲ್ಎಸ್ಎಯ (ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ) ವಕೀಲರೊಬ್ಬರನ್ನು ನೇಮಿಸಲಾಯಿತು. ಅವರಿಗೆ ಮತ್ತು ಅವರ ಸಹ-ಆರೋಪಿಗಳಿಗೆ ಅವರ ಕಾನೂನು ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಆಯ್ಕೆಯನ್ನು ನೀಡಲಾಗಿಲ್ಲ ಎಂದು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಅವರ ನಿರ್ಧಾರದ ಮೇಲೆ ಪರಿಣಾಮ ಬೀರಬಹುದಾದ ಅಂಶವಾದ ನೇಮಕಗೊಂಡ ವಕೀಲರ ಕುರಿತಾದ ಮಾಹಿತಿಯನ್ನು ಒದಗಿಸಲಾಗಿಲ್ಲ. ಇದಲ್ಲದೆ, ಡಿಎಲ್ಎಸ್ಎ ವಕೀಲರೊಂದಿಗೆ ಚರ್ಚಿಸಲು ಅರ್ಜಿದಾರರಿಗೆ ಅವಕಾಶ ನೀಡಲಾಗಿಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನೀಲಂ ಆಯ್ಕೆಯ ಕಾನೂನು ಸೇವೆಯನ್ನು ನಿರಾಕರಿಸುವುದು ಸಂವಿಧಾನದ 22 (1) ನೇ ವಿಧಿಯ ಅಡಿಯಲ್ಲಿ ಅವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಾಗರ್ ಶರ್ಮಾ, ಮನೋರಂಜನ್ ಡಿ ಮತ್ತು ಅಮೋಲ್ ಶಿಂಧೆ ಅವರೊಂದಿಗೆ ಆಜಾದ್ ಅವರನ್ನು ಡಿಸೆಂಬರ್ 13 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಆಜಾದ್ ಮತ್ತು ಶಿಂಧೆ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಶರ್ಮಾ ಮತ್ತು ಮನೋರಂಜನ್ ಡಿ ಸಂದರ್ಶಕರ ಗ್ಯಾಲರಿಯಿಂದ ಹೊಗೆಯನ್ನು ಹೊರಸೂಸುವ ಡಬ್ಬಿಗಳೊಂದಿಗೆ ಲೋಕಸಭಾ ಕೊಠಡಿ ಪ್ರವೇಶಿಸಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ, ಈ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಡಿಸೆಂಬರ್ 21ರಂದು ವಿಚಾರಣಾಧೀನ ನ್ಯಾಯಾಲಯವು ಎಫ್ಐಆರ್ ಪ್ರತಿಯನ್ನು ಆಜಾದ್ ಪರ ವಕೀಲರೊಂದಿಗೆ ಹಂಚಿಕೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿತ್ತು. ಆದರೆ, ಈ ಆದೇಶಕ್ಕೆ ಹೈಕೋರ್ಟ್ ಡಿಸೆಂಬರ್ 22ರಂದು ತಡೆಯಾಜ್ಞೆ ನೀಡಿತ್ತು.