ಸಂಸತ್ತು 
ಸುದ್ದಿಗಳು

ಸಂಸತ್ ಭದ್ರತೆ ಉಲ್ಲಂಘನೆ: ಬಿಡುಗಡೆ ಕೋರಿ ನೀಲಂ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಯಾವುದೇ ಅಗತ್ಯವಿಲ್ಲ ಮತ್ತು ಚಳಿಗಾಲದ ರಜೆಯ ನಂತರ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಂಸತ್‌ ಭದ್ರತೆ ಉಲ್ಲಂಘನೆ ಪ್ರಕರಣದ ಆರೋಪಿ ನೀಲಂ ಆಜಾದ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಶಾಲಿಂದರ್ ಕೌರ್ ಅವರಿದ್ದ ರಜಾಕಾಲೀನ ಪೀಠದೆದುರು ಆಜಾದ್ ಪರ ವಕೀಲ ಸುರೇಶ್ ಕುಮಾರ್ ಅವರು ಮನವಿ ಉಲ್ಲೇಖಿಸಿದರು.

ಆದರೆ ಪೀಠ, ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಯಾವುದೇ ಅಗತ್ಯವಿಲ್ಲ ಎಂದು ಹೇಳಿದೆ.

"ಏನೇ ಇದ್ದರೂ ಜನವರಿ 3ರಂದು ವಿಚಾರಣೆಗೆ ಬರಲಿರುವ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ" ಎಂದಿದೆ.

ಆಜಾದ್ ಅವರು ಪೊಲೀಸ್ ಕಸ್ಟಡಿಯಿಂದ ತಕ್ಷಣ ಬಿಡುಗಡೆ ಕೋರಿ ಬುಧವಾರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತನ್ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಡಿಸೆಂಬರ್ 21ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದ ಕಾನೂನುಬದ್ಧತೆಯನ್ನು ಆಜಾದ್ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ಪೊಲೀಸ್‌ ವಶಕ್ಕೆ ನೀಡುವ ಪ್ರಕ್ರಿಯೆಯ ವೇಳೆ ತನ್ನ ಪರವಾಗಿ ವಾದಿಸಲು ತನ್ನ ಆಯ್ಕೆಯ ವಕೀಲರನ್ನು ಸಂಪರ್ಕಿಸಲು ತನಗೆ ಅವಕಾಶ ನೀಡಿಲ್ಲ ಎಂದು ಆಜಾದ್ ದೂರಿದ್ದರು.

"ವಾಸ್ತವದಲ್ಲಿ, ರಿಮಾಂಡ್ ಅರ್ಜಿಯನ್ನು ವಿಲೇವಾರಿ ಮಾಡಿದ ನಂತರವೇ ನ್ಯಾಯಾಲಯವು ನಿಮ್ಮನ್ನು ಪ್ರತಿನಿಧಿಸಲು ನಿಮ್ಮ ಆಯ್ಕೆಯ ವಕೀಲರನ್ನು ಬಯಸುತ್ತೀರಾ ಎಂದು ಕೇಳಿತು, ಅದಕ್ಕೆ ನಾನು ಹೌದು ಎಂದು ಉತ್ತರಿಸಿದೆ. ಆನಂತರ ತನ್ನ ವಕೀಲರನ್ನು ಸಂಪರ್ಕಿಸಲು ಅನುಮತಿ ನೀಡುವ ಆದೇಶವನ್ನು ಹೊರಡಿಸಲಾಯಿತು" ಎಂದು ನೀಲಂ ತನ್ನ ಮನವಿಯಲ್ಲಿ ಆಪಾದಿಸಿದ್ದರು.

29 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಕಳೆದ ನಂತರ ಡಿಸೆಂಬರ್ 14ರಂದು ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಅವರು ವಿವರಿಸಿದ್ದರು.

ಸಾಗರ್ ಶರ್ಮಾ, ಮನೋರಂಜನ್ ಡಿ ಮತ್ತು ಅಮೋಲ್ ಶಿಂಧೆ ಅವರೊಂದಿಗೆ ಆಜಾದ್ ಅವರನ್ನು ಡಿಸೆಂಬರ್ 13 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಆಜಾದ್ ಮತ್ತು ಶಿಂಧೆ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಶರ್ಮಾ ಮತ್ತು ಮನೋರಂಜನ್ ಡಿ ಸಂದರ್ಶಕರ ಗ್ಯಾಲರಿಯಿಂದ ಹೊಗೆಯನ್ನು ಹೊರಸೂಸುವ ಡಬ್ಬಿಗಳೊಂದಿಗೆ ಲೋಕಸಭಾ ಕೊಠಡಿ ಪ್ರವೇಶಿಸಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ, ಈ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಡಿಸೆಂಬರ್ 21ರಂದು ವಿಚಾರಣಾಧೀನ ನ್ಯಾಯಾಲಯವು ಎಫ್ಐಆರ್ ಪ್ರತಿಯನ್ನು ಆಜಾದ್ ಪರ ವಕೀಲರೊಂದಿಗೆ ಹಂಚಿಕೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿತ್ತು. ಆದರೆ, ಈ ಆದೇಶಕ್ಕೆ ಹೈಕೋರ್ಟ್ ಡಿಸೆಂಬರ್ 22ರಂದು ತಡೆಯಾಜ್ಞೆ ನೀಡಿತ್ತು.