ಸಂಸತ್ ಭದ್ರತಾ ಲೋಪ ಪ್ರಕರಣದ ರೂವಾರಿ ಎನ್ನಲಾದ ಆರೋಪಿ ಲಲಿತ್ ಝಾನನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಇತರ ನಾಲ್ವರನ್ನು ಇದಾಗಲೇ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ದೆಹಲಿ ಪೊಲೀಸರ ಪರವಾಗಿ ಹಾಜರಾದ ಸರ್ಕಾರಿ ಅಭಿಯೋಜಕ ಅಖಂಡ ಪ್ರತಾಪ್ ಸಿಂಗ್ ಅವರು ಝಾನನ್ನು ಹೆಚ್ಚಿನ ತನಿಖೆಗಾಗಿ ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ, ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಆದೇಶಿಸಿದರು.
ಬುಧವಾರ ಲೋಕಸಭೆಯ ಕಲಾಪದ ವೇಳೆ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸಂದರ್ಶಕರ ಗ್ಯಾಲರಿಯಿಂದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳೊಂದಿಗೆ (ಕ್ಯಾನಿಸ್ಟರ್) ಸಂಸತ್ ಹಾಲ್‌ಗೆ ಜಿಗಿದಿದ್ದರು. ಈ ಇಬ್ಬರನ್ನೂ ಕೆಲ ಕ್ಷಣದಲ್ಲಿಯೇ ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಇದೇ ವೇಳೆ, ಸಂಸತ್ತಿನ ಹೊರಗೆ ಹಳದಿ ಹೊಗೆ ಸೂಸುವ ಕ್ಯಾನ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಅಮೋಲ್ ಶಿಂಧೆ ಮತ್ತು ನೀಲಂ ಎಂಬ ಇನ್ನಿಬ್ಬರನ್ನು ಬಂಧಿಸಲಾಗಿತ್ತು. ಇವರುಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿಯ ಆಧಾರದಲ್ಲಿ ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾದ ಝಾನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ಇಂದಿನ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ಅಖಂಡ್ ಪ್ರತಾಪ್ ಸಿಂಗ್ ಅವರು ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಕೋರುತ್ತಾ, "ಝಾನನ್ನು ಕಳೆದ ರಾತ್ರಿ ಬಂಧಿಸಲಾಗಿದೆ. ಪ್ರಕರಣದಲ್ಲಿ ತಾನು ಭಾಗಿಯಾಗಿರುವುದ ಆತ ಮಾಹಿತಿ ನೀಡಿದ್ದಾನೆ. ಅಲ್ಲದೇ, ಇಡೀ ಪ್ರಕರಣದ ಪಿತೂರಿಯನ್ನು ಹೇಗೆ ನಡೆಸಲಾಗಿದೆ ಮತ್ತು ಅವರ ಉದ್ದೇಶ ಏನಾಗಿತ್ತು ಎಂಬುದನ್ನು ತಿಳಿಸಿದ್ದಾನೆ. ಪಿತೂರಿ ಹೇಗೆ ನಡೆಸಲಾಯಿತು ಎಂಬುದರ ತನಿಖೆ ನಡೆಸಬೇಕಿದೆ. ಇದಕ್ಕೆ ಯಾರು ನೆರವು ನೀಡಿದ್ದಾರೆ ಎಂಬುದು ತಿಳಿಯಬೇಕಿದೆ. ಇದಕ್ಕಾಗಿ ವಿಸ್ತೃತ ತನಿಖೆಯ ಅಗತ್ಯವಿದೆ, ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಬೇಕಿದೆ" ಎಂದು ಮಾಹಿತಿ ನೀಡಿದರು.
ಆಗ ನ್ಯಾಯಾಧೀಶರು "ಏಳು ದಿನ ಆರೋಪಿಯನ್ನು ರಿಮ್ಯಾಂಡ್‌ಗೆ ನೀಡಲಾಗುವುದು" ಎಂದರು. ಈ ಆದೇಶದಂತೆ ಪೊಲೀಸರು ಝಾನನ್ನು ತಮ್ಮ ಕಸ್ಟಡಿಗೆ ಪಡೆದರು.