ಸಂಸತ್ತು 
ಸುದ್ದಿಗಳು

ಸಂಸತ್ ಭದ್ರತಾ ಉಲ್ಲಂಘನೆ: ಪೊಲೀಸ್‌ ಕಸ್ಟಡಿಯಿಂದ ಬಿಡುಗಡೆ ಕೋರಿದ್ದ ನೀಲಂ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನೀಲಂ ಈಗಾಗಲೇ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿರುವುದರಿಂದ ಆಕೆಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನಿರ್ವಹಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

Bar & Bench

ತಮ್ಮನ್ನು ಪೊಲೀಸ್‌ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಆರೋಪಿ ನೀಲಂ ಆಜಾದ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠವು ಮನವಿಯು ನಿರ್ವಹಣೆಗೆ ಸಾಧ್ಯವಿಲ್ಲ. ನೀಲಂ ಅವರು ಈಗಾಗಲೇ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದಿತು.

ಪೊಲೀಸ್ ಕಸ್ಟಡಿಯಿಂದ ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ನೀಲಂ ಕಳೆದ ವಾರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 21, 2023 ರಂದು ವಿಚಾರಣಾ ನ್ಯಾಯಾಲಯದ ಆದೇಶದ ಕಾನೂನುಬದ್ಧತೆಯನ್ನು ಆಕೆ ಪ್ರಶ್ನಿಸಿದ್ದರು.

ರಿಮಾಂಡ್ ವಿಚಾರಣೆಯ ಸಮಯದಲ್ಲಿ ತನ್ನ ಪರವಾಗಿ ವಾದಿಸಲು ತನ್ನ ಆಯ್ಕೆಯ ಕಾನೂನು ವೃತ್ತಿಪರರನ್ನು ಸಂಪರ್ಕಿಸಲು ತನಗೆ ಅವಕಾಶ ನೀಡಿಲ್ಲ ಎಂದು ಆಜಾದ್ ವಾದಿಸಿದ್ದರು.

ಸಾಗರ್ ಶರ್ಮಾ, ಮನೋರಂಜನ್ ಡಿ ಮತ್ತು ಅಮೋಲ್ ಶಿಂಧೆ ಅವರೊಂದಿಗೆ ನೀಲಂ ಅವರನ್ನು ಡಿಸೆಂಬರ್ 13ರಂದು ದೆಹಲಿ ಪೊಲೀಸರು ಬಂಧಿಸಿದ್ದರು.

ನೀಲಂ ಮತ್ತು ಶಿಂಧೆ ಸಂಸತ್‌ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಶರ್ಮಾ ಮತ್ತು ಮನೋರಂಜನ್ ಅವರು ಹಳದಿ ಹೊಗೆ ಹೊರಸೂಸುವ ಡಬ್ಬಿಗಳೊಂದಿಗೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದನದ ಅಂಗಳಕ್ಕೆ ಜಿಗಿದಿದ್ದರು. ನಂತರ ಉಳಿದ ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಲಾಗಿತ್ತು.

ಡಿಸೆಂಬರ್ 21ರಂದು ವಿಚಾರಣಾ ನ್ಯಾಯಾಲಯವು ಎಫ್ಐಆರ್ ಪ್ರತಿಯನ್ನು ನೀಲಂ ಪರ ವಕೀಲರೊಂದಿಗೆ ಹಂಚಿಕೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿತ್ತು . ಆದರೆ, ಈ ಆದೇಶಕ್ಕೆ ಹೈಕೋರ್ಟ್ ಡಿಸೆಂಬರ್ 22ರಂದು ತಡೆಯಾಜ್ಞೆ ನೀಡಿತ್ತು.