ಸಂಸತ್ತಿನ ಭದ್ರತಾ ಉಲ್ಲಂಘನೆ 
ಸುದ್ದಿಗಳು

ಸಂಸತ್ ಭವನದ ಭದ್ರತಾ ಉಲ್ಲಂಘನೆ: ಆರೋಪಿ ನೀಲಂ ಆಜಾದ್‌ಗೆ ಎಫ್ಐಆರ್ ಪ್ರತಿ ನೀಡುವ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

Bar & Bench

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಎಫ್ಐಆರ್ ಪ್ರತಿಯನ್ನು ಆರೋಪಿಗಳಲ್ಲಿ ಒಬ್ಬರಾದ ನೀಲಂ ಆಜಾದ್ ಅವರಿಗೆ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. 

ವಿಚಾರಣಾ ನ್ಯಾಯಾಲಯ ಸೂಕ್ತ ಕಾರ್ಯವಿಧಾನ ಅನುಸರಿಸಿಲ್ಲ ಮತ್ತು ಎಫ್ಐಆರ್‌ನಲ್ಲಿ ಸೂಕ್ಷ್ಮ ವಿವರಗಳಿವೆ ಎಂದು ಗಮನಿಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ತಡೆಯಾಜ್ಞೆ ನೀಡಿದರು.

ಎಫ್ಐಆರ್ ಸೂಕ್ಷ್ಮ ವಿವರಗಳನ್ನು ಒಳಗೊಂಡಿದ್ದು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಎಫ್ಐಆರ್ ಪ್ರತಿ ಪಡೆಯಲು ಆರೋಪಿಗಳು ಮೊದಲು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಬೇಕಾಗಿತ್ತು ಎಂಬ ವಿಚಾರವನ್ನು ಹೈಕೋರ್ಟ್‌ ಗಮನಿಸಿತು. ನಂತರ ಆರೋಪಿಗಳಿಗೆ ಎಫ್ಐಆರ್ ನೀಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಪೊಲೀಸ್‌ ಆಯುಕ್ತರು ತ್ರಿಸದಸ್ಯ ಸಮಿತಿ ರಚಿಸಬೇಕಿತ್ತು.

ಎಫ್ಐಆರ್ ಒದಗಿಸಲು ಸಾಧ್ಯವಿಲ್ಲ ಎಂದು ಸಮಿತಿ ನಿರ್ಧರಿಸಿದರೆ ಮಾತ್ರ ಆರೋಪಿಗಳು ನ್ಯಾಯಾಲಯ ಸಂಪರ್ಕಿಸಬಹುದು ಎಂದು ನ್ಯಾ. ಶರ್ಮಾ ವಿವರಿಸಿದರು. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದ ಕಾರ್ಯಚಾಲನೆಗೆ ಹೈಕೋರ್ಟ್ ತಡೆ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಂ ಆಜಾದ್ ಪ್ರತಿಕ್ರಿಯೆ ಬಯಸಿರುವ ನ್ಯಾಯಾಲಯ ಜನವರಿ 4, 2024ಕ್ಕೆ ಪ್ರಕರಣ ಪಟ್ಟಿ ಮಾಡಿದೆ.

ನಿನ್ನೆ, ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಎಫ್ಐಆರ್‌ ಪ್ರತಿಯನ್ನು ಆಜಾದ್ ಅವರಿಗೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ದೆಹಲಿ ಪೊಲೀಸರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಅವರ ತೀವ್ರ ವಿರೋಧದ ನಡುವೆಯೂ ವಿಚಾರಣಾ ನ್ಯಾಯಾಲಯ ಈ ಆದೇಶ ನೀಡಿತ್ತು. ಹೀಗಾಗಿ ಇದನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.