Parliament watch 
ಸುದ್ದಿಗಳು

[ಸಂಸತ್ ಅವಲೋಕನ] 29,154 ಯುಆರ್‌ಎಲ್‌ಗಳಿಗೆ ಕೇಂದ್ರದ ನಿರ್ಬಂಧ: ಪೋಕ್ಸೊ ಪ್ರಕರಣಗಳಲ್ಲಿ ಕಡಿಮೆಯಾದ ಶಿಕ್ಷೆಯ ಪ್ರಮಾಣ

ಸರ್ಕಾರಿ ಸಂಸ್ಥೆಗಳ ಮೇಲೆ ನಡೆದ ಸೈಬರ್ ದಾಳಿಗಳು, ಸ್ಟಾರ್ಟ್ಅಪ್ಗಳಿಗಾಗಿ ರೂಪಿಸಲಾದ TIDE 2.0 ಯೋಜನೆಯ ಪ್ರಗತಿ ಮತ್ತಿತರ ಪ್ರಶ್ನೆಗಳಿಗೆ ಸರ್ಕಾರ ಫೆಬ್ರವರಿ 10ರಂದು ಉತ್ತರ ನೀಡಿತು.

Bar & Bench

ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ನಿರ್ಬಂಧಕ್ಕೊಳಗಾದ ಯುಆರ್‌ಎಲ್‌ಗಳು, ಪೋಕ್ಸೊ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ಮತ್ತಿತರ ಸಂಗತಿಗಳ ಕುರಿತಾದ ಮಾಹಿತಿಯನ್ನು ಪ್ರಶ್ನೋತ್ತರ ಕಲಾಪದ ವೇಳೆ ನೀಡಿದೆ.

2018 ರಿಂದ ಇಲ್ಲಿಯವರೆಗೆ 29,154 ಯುಆರ್‌ಎಲ್‌ಗಳಿಗೆ ನಿರ್ಬಂಧ  

ರಾಜ್ಯಸಭಾ ಸದಸ್ಯ ಕೇರಳದ ವಿ ಶಿವದಾಸನ್ ಅವರ ಪ್ರಶ್ನೆಗೆ ಉತ್ತರವಾಗಿ,  ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು  ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ2018, 2019, 2020, 2021 ಹಾಗೂ 2022ರಲ್ಲಿ ಕ್ರಮವಾಗಿ 2,799, 3,635, 9,849, 6,096 ಹಾಗೂ 6,775 ಜಾಲತಾಣ ಯುಆರ್‌ಎಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಅತಿಹೆಚ್ಚು ಯುಆರ್‌ಎಲ್‌ಗಳನ್ನು ನಿರ್ಬಂಧಿಸಲಾಗಿದ್ದು ಕಳೆದ ಐದು ವರ್ಷಗಳಲ್ಲಿ ಸಚಿವಾಲಯ ಕಡಿವಾಣ ಹಾಕಿದ ಯುಆರ್‌ಎಲ್‌ಗಳ ವೇದಿಕೆವಾರು ವಿವರ ಇಂತಿದೆ:

URLs blocked by MeitY, platform-wise

ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆಗಳಲ್ಲಿ (ಪೋಕ್ಸೊ ಪ್ರಕರಣ) ವಿಧಿಸಲಾಗುತ್ತಿರುವ ಶಿಕ್ಷೆಯ ಪ್ರಮಾಣ 2014ರಿಂದ ಶೇ.38ನ್ನು ದಾಟಿಲ್ಲ ಎಂಬದು ನಿಜವೇ ಎಂದು ಲೋಕಸಭೆಯಲ್ಲಿ, ತೆಲಂಗಾಣ ಸಂಸದರಾದ ವೆಂಕಟೇಶ್ ನೇತಾ ಬೋರ್ಲಕುಂಟಾ ಮತ್ತು ಜಿ ರಂಜಿತ್ ರೆಡ್ಡಿ ಅವರು ಪ್ರಶ್ನಿಸಿದರು. ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಳ್ಳುವ ಪ್ರಸ್ತಾವನೆ ಇದೆಯೇ ಎಂದು ಅವರು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು  2016, 2017, 2018, 2019, 2020 ಹಾಗೂ 2021 ರಲ್ಲಿ ಕಾಯಿದೆಯಡಿ ಶಿಕ್ಷೆಯ ಪ್ರಮಾಣ ಕ್ರಮವಾಗಿ 29.6%, 33.2%, 34.2%, 34.6%, 39.6% ಹಾಗೂ 32.2%.ರಷ್ಟಿದೆ ಎಂದು ಬಹಿರಂಗಪಡಿಸಿದರು.

2014 ಮತ್ತು 2015ನೇ ವರ್ಷಗಳಿಗೆ ಸಂಬಂಧಿಸಿದಂತೆ ರಾಜ್ಯವಾರು ಮತ್ತು ಕೇಂದ್ರಾಡಳಿತಪ್ರದೇಶವಾರು ಮಾಹಿತಿಯನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ. 2014 ರಲ್ಲಿ, ರಾಜ್ಯಗಳಲ್ಲಿ ಶಿಕ್ಷೆಯ ಪ್ರಮಾಣ  30% ಆಗಿದ್ದರೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು 35.6% ಆಗಿತ್ತು. ಅದರ ನಂತರದ ವರ್ಷ ಅಂದರೆ 2015ರಲ್ಲಿ, ರಾಜ್ಯಗಳಲ್ಲಿ ಶಿಕ್ಷೆಯ ಪ್ರಮಾಣ 36% ಆಗಿದ್ದರೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಪ್ರಮಾಣ 41.3% ರಷ್ಟಿತ್ತು.