ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಉತ್ತರ ನೀಡಿದೆ.
ಕಳೆದ ಹತ್ತು ವರ್ಷಗಳಲ್ಲಿ ಪಿಎಂಎಲ್‌ಎ ಅಡಿ ದಾಖಲಾದ 5,297 ಪ್ರಕರಣಗಳಲ್ಲಿ ಕೇವಲ 40ರಲ್ಲಷ್ಟೇ ಶಿಕ್ಷೆ ವಿಧಿಸಲಾಗಿದೆ.
ಕಳೆದ ದಶಕದಲ್ಲಿ ದಾಖಲಾದ ಯುಎಪಿಎ ಪ್ರಕರಣಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದ್ದು ಅಂತಹ ಪ್ರಕರಣಗಳಲ್ಲಿ ಖುಲಾಸೆಗೊಂಡವರ ಸಂಖ್ಯೆಯು ಶಿಕ್ಷೆಗೆ ಒಳಗಾದವರ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಿದೆ.
ಅಲ್ಲದೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗಳು (ಎನ್‌ಸಿಎಲ್‌ಟಿ) ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಎದುರು ಅನೇಕ ಪ್ರಕರಣಗಳ ವಿಚಾರಣೆ ಬಾಕಿ ಇರುವುದು ಬಹಿರಂಗಗೊಂಡಿದೆ.
ಯುಎಪಿಎ ಮತ್ತು ಪಿಎಂಎಲ್‌ಎ ಪ್ರಕರಣಗಳ ವಿವರ
2014 ರಿಂದ ಯುಎಪಿಎ ಮತ್ತು ಪಿಎಂಎಲ್‌ಎ ಅಡಿಯಲ್ಲಿ ದಾಖಲಾದ ಪ್ರಕರಣಗಳು, ಖುಲಾಸೆ ಮತ್ತು ದೋಷಾರೋಪಣೆಗಳ ಕುರಿತು ಹೈದರಾಬಾದ್ ಲೋಕಸಭಾ ಸಂಸದ ಅಸಾದುದ್ದೀನ್ ಒವೈಸಿ ಅವರು ಗೃಹ ಸಚಿವಾಲಯದಿಂದ ವಿವರ ಕೇಳಿದ್ದರು.
ಯುಎಪಿಎ ಅಡಿಯಲ್ಲಿ2014ರಿಂದ 8,719 ಪ್ರಕರಣ ದಾಖಲಾಗಿದ್ದು, 222 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗಿದ್ದರೆ 567 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಸಚಿವಾಲಯ ಬಹಿರಂಗಪಡಿಸಿದೆ . ಪ್ರಕರಣದ ವರ್ಷವಾರು ಪಟ್ಟಿ ಈ ರೀತಿ ಇದೆ:
ಇದೇ ಅವಧಿಯಲ್ಲಿ ಪಿಎಂಎಲ್‌ಎ ಅಡಿಯಲ್ಲಿ 5,297 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 40 ಪ್ರಕರಣಗಳಲ್ಲಷ್ಟೇ ಶಿಕ್ಷೆ ವಿಧಿಸಲಾಗಿದ್ದು 3 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದ ವರ್ಷವಾರು ಪಟ್ಟಿ ಈ ರೀತಿ ಇದೆ:
ಮತ್ತೊಂದೆಡೆ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು 2019ರಿಂದ ಜನಪ್ರತಿನಿಧಿಗಳು ಮತ್ತಿತರ ರಾಜಕಾರಣಿಗಳ ವಿರುದ್ಧದ PMLA ಪ್ರಕರಣಗಳಲ್ಲಿ ಜಾರಿ ಪ್ರಕರಣದ ಮಾಹಿತಿ ವರದಿಗಳ (ECIR) ವಿಚಾರಣೆ ಪೂರ್ಣಗೊಂಡ, ಶಿಕ್ಷೆ ವಿಧಿಸಲಾದ ವಿವರಗಳನ್ನು ಕೇಳಿದ್ದರು.
2019 ರಿಂದ ರಾಜಕಾರಣಿಗಳ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ 132 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಬಹಿರಂಗಪಡಿಸಿದೆ. ಪ್ರಕರಣದ ವರ್ಷವಾರು ಪಟ್ಟಿ ಈ ರೀತಿ ಇದೆ:
ಅದೇ ಅವಧಿಯಲ್ಲಿ, PMLA ಅಡಿಯಲ್ಲಿ 5 ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದ್ದು 1 ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪ್ರಕರಣದ ವರ್ಷವಾರು ಪಟ್ಟಿ ಈ ರೀತಿ ಇದೆ:
ಕಂಪೆನಿ ಕಾನೂನು ನ್ಯಾಯಮಂಡಳಿಗಳ ಹಲವು ಪ್ರಕರಣಗಳು ಬಾಕಿ
ರಾಜ್ಯಸಭೆಯಲ್ಲಿ, ಸಂಸದ ಅಮರೇಂದ್ರ ಧಾರಿ ಸಿಂಗ್ ಅವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಬಾಕಿ ಇರುವ ಪ್ರಕರಣಗಳ ಬಗ್ಗೆ ವಿವರಗಳನ್ನು ಕೋರಿದ್ದರು.
ಎನ್‌ಸಿಎಲ್‌ಟಿ ಒದಗಿಸಿದ ಮಾಹಿತಿಯ ಪ್ರಕಾರ, ಜೂನ್ 30, 2024 ರಂತೆ, ಒಟ್ಟು 19,770 ಪ್ರಕರಣಗಳು ಬಾಕಿ ಉಳಿದಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಪೈಕಿ 9,645 ಪ್ರಕರಣಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಬಾಕಿಯಿದ್ದರೆ, 10,125 ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.
ಅದೇ ಅವಧಿಗೆ ಸಂಬಂಧಿಸಿದಂತೆ ಎನ್‌ಸಿಎಲ್‌ಎಟಿ ಒದಗಿಸಿದ ಮಾಹಿತಿಯ ಪ್ರಕಾರ, ಒಟ್ಟು 3,019 ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ 1,654 ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಬಾಕಿಯಿದ್ದರೆ, 1,365 ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.
ಎನ್‌ಸಿಎಲ್‌ಎಟಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಕಿ ಉಳಿದಿರುವ 1,365 ಪ್ರಕರಣಗಳಲ್ಲಿ 783 ಪ್ರಕರಣಗಳು ಎರಡು ವರ್ಷಗಳಿಗಿಂತ ಹೆಚ್ಚು ಮತ್ತು 456 ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿವೆ.