A1
A1
ಸುದ್ದಿಗಳು

[ಸಂಸತ್ ಅವಲೋಕನ] ಇ ಡಿ ದಾಳಿಯಿಂದ ಹಿಡಿದು ಎನ್‌ಸಿಎಲ್‌ಎಟಿ ಪೀಠ ಸ್ಥಾಪನೆಯವರೆಗಿನ ಪ್ರಶ್ನೋತ್ತರ ಮಾಹಿತಿ

Bar & Bench

ಸಂಸತ್‌ ಬಜೆಟ್‌ ಅಧಿವೇಶನದ ಪ್ರಥಮ ದಿನ ಜಾರಿ ನಿರ್ದೇಶನಾಲಯದ ದಾಳಿಯಿಂದ ಹಿಡಿದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಪೀಠ ಸ್ಥಾಪನೆಯ ವಿಚಾರದವರೆಗೆ ವಿವಿಧ ಪ್ರಶ್ನೆಗಳಿಗೆ ಉತ್ತರ ಪಡೆಯಲಾಯಿತು. ಕೆಲ ಪ್ರಮುಖ ಅಂಶಗಳ ವಿವರ ಹೀಗಿದೆ:

ಇ ಡಿ ದಾಳಿ

ಜಾರಿ ನಿರ್ದೇಶನಾಲಯದ ತನಿಖೆಗೆ ಸಂಬಂಧಿಸಿದಂತೆ 943 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ದೂರುಗಳ ದಾಖಲು.

ಅಕ್ರಮ ಹಣ ವರ್ಗಾವಣೆ ಅಪರಾಧಕ್ಕಾಗಿ 23 ಆರೋಪಿಗಳಿಗೆ ಪಿಎಂಎಲ್‌ಎ ವಿಶೇಷ ನ್ಯಾಯಾಲಯಗಳಿಂದ ಶಿಕ್ಷೆ. ಒಂದು ಪ್ರಕರಣದಲ್ಲಿ ಅರ್ಹತೆಯ ಮೇರೆಗೆ ಆರೋಪಿಗಳ ಬಿಡುಗಡೆ.

ಹಿಂದಿನ ದಶಕಕ್ಕೆ ಹೋಲಿಸಿದರೆ ಕಳೆದ ಒಂಬತ್ತು ವರ್ಷಗಳಲ್ಲಿ ಇ ಡಿ ನಡೆಸಿದ ದಾಳಿಯಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಸಂಸತ್ತಿಗೆ ನೀಡಿದ ಉತ್ತರದಿಂದ ಬಹಿರಂಗ. 2004-2014ರ ನಡುವೆ 112 ದಾಳಿಗಳು ನಡೆದಿದ್ದು ₹5,346.16 ಕೋಟಿ ಹಣ ಮುಟ್ಟುಗೋಲು. 2014-22ರ ಅವಧಿಯಲ್ಲಿ 2,974 ದಾಳಿ ಪ್ರಕರಣಗಳು ನಡೆದಿದ್ದು ₹95,432.08 ಕೋಟಿ ಹಣ ಮುಟ್ಟುಗೋಲು. ಅಂತೆಯೇ 839 ಪ್ರಾಸಿಕ್ಯೂಷನ್ ದೂರು ದಾಖಲು.

ಪಿಎಂಎಲ್‌ಎ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಇ ಡಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಶೋಧ/ದಾಳಿಗಳ ಸಂಖ್ಯೆಗೆ ಸಂಬಂಧಿಸಿದೆ ಮಾಹಿತಿ ಹೀಗಿದೆ:

ಪಾಂಡೋರಾ ಪೇಪರ್ಸ್ ತನಿಖೆ

ಕೆಲವು ಭಾರತೀಯರ ಸಾಗರದಾಚೆಯ ಹಣದ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಡಿಟಿ ಅಧ್ಯಕ್ಷರ ಸಂಯೋಜಕತ್ವದಲ್ಲಿ ಸಂಘಟಿತ ಮತ್ತು ತ್ವರಿತ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇ ಡಿ), ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಇಂಡಿಯಾ (ಎಫ್‌ಐಯು-ಇಂಡಿಯಾ) ಸಿಬಿಡಿಟಿಯ ವಿದೇಶಿ ತೆರಿಗೆ ಮತ್ತು ತೆರಿಗೆ ಸಂಶೋಧನಾ ವಿಭಾಗ ಸೇರಿದಂತೆ ಬಹು ತನಿಖಾ ಸಂಸ್ಥೆಗಳ ಸಮೂಹವನ್ನು (ಎಂಎಜಿ) ರಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಎನ್‌ಸಿಎಲ್‌ಟಿ ಮತ್ತುಎನ್‌ಸಿಎಲ್‌ಎಟಿ ಕುರಿತ ಪ್ರಶ್ನೆ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಯಾವುದೇ ಹೊಸ ಪೀಠಗಳನ್ನು ಸ್ಥಾಪಿಸುವ ಪ್ರಸ್ತಾವನೆ ಪರಿಗಣನೆಯಲ್ಲಿಲ್ಲ ಎಂದು ಉತ್ತರಿಸಿದ ಕೇಂದ್ರ.

ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯಡಿ (ಐಬಿಸಿ) 13,188 ಪ್ರಕರಣಗಳು ಮತ್ತು ವಿಲೀನ ಹಾಗೂ ಸ್ವಾಧೀನ ಪ್ರಕ್ರಿಯೆಯಡಿ 1,107 ಪ್ರಕರಣಗಳು ಪ್ರಕರಣಗಳು ಸೇರಿದಂತೆ ಈ ವರ್ಷದ ಜನವರಿ 31 ರವರೆಗೆ 21,089 ಪ್ರಕರಣಗಳು ಎನ್‌ಸಿಎಲ್‌ಟಿಯಲ್ಲಿ ಬಾಕಿ ಇವೆ. ಇತ್ಯರ್ಥ ಪ್ರಕ್ರಿಯೆಯಡಿಯಲ್ಲಿ 4,656 ಪ್ರಕರಣಗಳು ಇದ್ದು 470 ಪರಿಹಾರ ಯೋಜನೆಗಳು, ₹2,95,744.84 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.