ಕೋವಿಡ್- 19 ಸಾಂಕ್ರಾಮಿಕ ರೋಗದ ಹಾವಳಿ ತಗ್ಗಿದ ಬಳಿಕವೂ ವರ್ಚುವಲ್ ನ್ಯಾಯಾಲಯಗಳ ಕಾರ್ಯನಿರ್ವಹಣೆ ಮುಂದುವರಿಯಬೇಕೆಂದು ರಾಜ್ಯಸಭಾ ಸಂಸದ ಭೂಪೇಂದರ್ ಯಾದವ್ ನೇತೃತ್ವದ ‘ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
‘ವಿಳಂಬವಾಗಿ ನ್ಯಾಯದಾನ ಮಾಡುವುದು ನ್ಯಾಯವನ್ನು ನಿರಾಕರಿಸಿದಂತೆ. ಹಾಗೆಯೇ ಅವಸರವಾಗಿ ನ್ಯಾಯದಾನ ಮಾಡುವುದು ಕೂಡ ನ್ಯಾಯದ ಸಮಾಧಿ ಮಾಡಿದಂತೆ' ಎಂಬ ಮಾತಿದೆ ಎಂದಿರುವ 103ನೇ ಸಂಸತ್ ಸ್ಥಾಯಿ ಸಮಿತಿ ವರದಿಯಲ್ಲಿ ಹೀಗೆ ಹೇಳಲಾಗಿದೆ:
"... ವರ್ಚುವಲ್ ಕೋರ್ಟ್‌ಗಳು ಈ ಎರಡು ವಿಪರೀತಗಳ ನಡುವೆ ಸಮತೋಲನ ಸಾಧಿಸುತ್ತವೆ ಮತ್ತು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೆ ದಾವೆ ಹೂಡುವ ಸಾರ್ವಜನಿಕರಿಗೆ ತ್ವರಿತ ನ್ಯಾಯವನ್ನು ನೀಡುತ್ತವೆ." ಎಂದಿದೆ.
ಮೇಲ್ಮನವಿ ಸಲ್ಲಿಸುವಾಗ ಹಾಗೂ ಕಕ್ಷೀದಾರರು/ ವಕೀಲರ ದೈಹಿಕ ಉಪಸ್ಥಿತಿ ಅಗತ್ಯ ಇಲ್ಲದ ಅಂತಿಮ ವಿಚಾರಣೆಯಂತಹ ಕೆಲ ಪ್ರಕರಣಗಳಲ್ಲಿ ಎಲ್ಲಾ ಕಕ್ಷೀದಾರರ ಒಪ್ಪಿಗೆ ಪಡೆದು ಪ್ರಯೋಗಾತ್ಮಕವಾಗಿ ಈಗಿರುವ ವ್ಯವಸ್ಥೆಯನ್ನು ಮುಂದುವರಿಸಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು, ನ್ಯಾಯಮಂಡಳಿಗಳ ಸ್ಥಾಪನೆಗೆ ಸಂಬಂಧಿಸಿದ ವೆಚ್ಚ ಕಡಿತ ಮಾಡಬಹುದು. ಜೊತೆಗೆ ನ್ಯಾಯಾಲಯಗಳಲ್ಲಿ ಜನದಟ್ಟಣೆ ಕಡಿಮೆ ಮಾಡಬಹುದು. ದಾವೆ ವೆಚ್ಚ ಮತ್ತಿತರ ಖರ್ಚುಗಳನ್ನು ಕೂಡ ತಪ್ಪಿಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
"ಇ-ಕೋರ್ಟ್ಸ್ ಇಂಟಿಗ್ರೇಟೆಡ್ ಮಿಷನ್ ಮೋಡ್ (ಅಂತರ್ಜಾಲ ಆಧರಿತ ನ್ಯಾಯಾಲಯಗಳ ಸಂಯೋಜನೆ) ಯೋಜನೆಯ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿರುವುದು ಖೇದಕರ ಸಂಗತಿ" ಎಂದು ಕೂಡ ಸ್ಥಾಯಿ ಸಮಿತಿ ಹೇಳಿದೆ.
"ಸೂಕ್ತ ಮೂಲಸೌಕರ್ಯಗಳಿಲ್ಲದೆ, ಪ್ರಕರಣಗಳ ವರ್ಚುವಲ್ ವಿಚಾರಣೆ ನಡೆಸಬೇಕೆನ್ನುವುದು ಅಸಾಧ್ಯದ ಮಾತಾಗುತ್ತದೆ. ಅಲ್ಲದೆ ಎಲ್ಲಾ ನ್ಯಾಯಾಲಯ ಸಂಕೀರ್ಣಗಳು ಸಂಪೂರ್ಣವಾಗಿ ಐಸಿಟಿ ತಾಂತ್ರಿಕ ಸಾಮರ್ಥ್ಯ ಪಡೆದಾಗ ಮಾತ್ರ ವರ್ಚುವಲ್ ನ್ಯಾಯಾಲಯಗಳ ಪ್ರಯೋಜನ ದಕ್ಕುತ್ತದೆ ಎಂದು ಸಮಿತಿ ಭಾವಿಸಿದೆ. ಸಾಕಷ್ಟು ಎಚ್ಚರ ವಹಿಸಿ, ಅಡೆತಡೆಗಳನ್ನು ಗುರುತಿಸಿ ಮತ್ತು ನಿಗದಿತ ಕಾಲಾವಧಿಯಲ್ಲಿ ಸಾಕಷ್ಟು ಗುರಿ ಸಾಧಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಂಗ ಇಲಾಖೆಗೆ ಸಮಿತಿ ಬಲವಾದ ಶಿಫಾರಸು ಮಾಡುತ್ತದೆ”103ನೇ ಸಂಸದೀಯ ಸ್ಥಾಯಿ ಸಮಿತಿ ವರದಿ
ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಶುಕ್ರವಾರ ಸಲ್ಲಿಸಲಾದ ವರದಿಯಲ್ಲಿ, ದೇಶದೆಲ್ಲೆಡೆ ಇರುವ TDSAT, IPAB, NCLAT ರೀತಿಯ ನ್ಯಾಯಾಲಯಗಳು, ನ್ಯಾಯಮಂಡಳಿಗಳಿಗೆ ಕಕ್ಷೀದಾರರು / ವಕೀಲರು ಖುದ್ದಾಗಿ ಹಾಜರಾಗಬೇಕಾದ ಅಗತ್ಯ ಇಲ್ಲದಿರುವುದರಿಂದ ಇವುಗಳಿಗೆ ಶಾಶ್ವತವಾಗಿ ವರ್ಚುವಲ್ ನ್ಯಾಯಾಲಯದ ರೂಪ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.
ವರ್ಚುವಲ್ ವಿಚಾರಣೆಗಳನ್ನು ನಡೆಸಲು ದೇಶದೆಲ್ಲೆಡೆ ಇರುವ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳು ಇನ್ನೂ ರೂಪುಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರ್ಚುವಲ್ ಕೋರ್ಟ್‌ಗಳಾಗಿ ಬದಲಾಗಲು ದೊಡ್ಡಪ್ರಮಾಣದಲ್ಲಿ ಹಣ ವಿನಿಯೋಗಿಸಬೇಕಿರುವುದರಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಂತಹ ಹೊಸ ಹಣಕಾಸು ಮಾದರಿಗಳ ಕಾರ್ಯಸಾಧ್ಯತೆಗೆ ಸಮಿತಿ ಶಿಫಾರಸು ಮಾಡಿದೆ.
ತಾಂತ್ರಿಕವಾಗಿ ಪರಿಣತಿ ಇಲ್ಲದವರ ಮನೆ ಬಾಗಿಲಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸಾಧನಗಳನ್ನು ಕೊಂಡೊಯ್ಯುವ ಮೂಲಕ ಜನರು ನ್ಯಾಯಾಲಯದೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು/ ಸೇವಾದಾರರು ಭಾಗಿಯಾಗಬೇಕಾದ ಅಗತ್ಯ ಇದೆ. ಸಂಪರ್ಕದ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ಅಭಿಯಾನವನ್ನು ಕೇಂದ್ರ ಸಂವಹನ ಸಚಿವಾಲಯ ಸೂಕ್ತ ಸಮಯಕ್ಕೆ ಕೈಗೆತ್ತಿಕೊಳ್ಳಬೇಕು. ತಂತ್ರಜ್ಞಾನದ ಬಗ್ಗೆ ವಕೀಲರಿಗೆ ಅರಿವು ಮೂಡಿಸಲು ರಾಜ್ಯ ಬಾರ್ ಕೌನ್ಸಿಲ್‌ಗಳು ತರಗತಿಗಳನ್ನು ನಡೆಸುತ್ತವೆ ಎಂದು ಶಿಫಾರಸು ಮಾಡಲಾಗಿದೆ.
ಮುಕ್ತ ನ್ಯಾಯದಾನ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ ಕೆಲವು ನಿರ್ದಿಷ್ಟ ಪ್ರಕರಣಗಳನ್ನು ನೇರ ಪ್ರಸಾರ ಮಾಡಬೇಕು ಎಂಬುದು ಸಮಿತಿಯ ಪ್ರಮುಖ ಶಿಫಾರಸುಗಳಲ್ಲಿ ಒಂದು. ವರ್ಚುವಲ್ ವಿಚಾರಣೆಗಳಿಗೆ ತಮ್ಮದೇ ಆದ ಮಿತಿಗಳಿದ್ದರೂ ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಉತ್ತಮವಾದವು ಮತ್ತು ಅವು ಸ್ವೀಕಾರಾರ್ಹವಾಗಿವೆ." ಎಂದು ಸಮಿತಿ ಪ್ರತಿಪಾದಿಸಿದೆ.