ಅರ್ನಾಬ್ ಮತ್ತು ತಮ್ಮ ನಡುವೆ ನಡೆದಿದ್ದ ವಿವಾದಾತ್ಮಕ ವಾಟ್ಸಾಪ್ ಸಂವಹನ ಕೇವಲ ಸಡಿಲ ಮಾತುಕತೆಯಾಗಿದ್ದು ಇದನ್ನು ಆಧರಿಸಿ ತಮ್ಮನ್ನು ಬಂಧನದಲ್ಲಿಡಬಾರದು ಎಂದು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಿಎಆರ್‌ಸಿ- ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಸೋಮವಾರ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ ತಿರುಚಿದ ಪ್ರಕರಣದಲ್ಲಿ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದರು.
“ವಾಟ್ಸಾಪ್ ಚಾಟ್‌ಗಳಿಗೆ ಸಂಬಂಧಿಸಿದಂತೆ, ಅವು ಸಡಿಲವಾದ ಮಾತುಕತೆ ಎಂದು ಮಾತ್ರ ಹೇಳಬಲ್ಲೆ. ಅವು ಸ್ವೀಕಾರಾರ್ಹವಲ್ಲ ಮತ್ತು ದೃಢೀಕರಣದ ಪುರಾವೆಗಳು ಬೇಕಾಗುತ್ತವೆ. ಸಡಿಲವಾದ ಮಾತುಕತೆಗಾಗಿ ಯಾರನ್ನೂ ಬಂಧಿಸಬಾರದು," ಎಂದು ದಾಸ್‌ಗುಪ್ತಾ ಪರ ಹಾಜರಿದ್ದ ಹಿರಿಯ ವಕೀಲ ಆಬಾದ್ ಪಾಂಡ ವಾದ ಮಂಡಿಸಿದರು.
ಪಾರ್ಥೋ ಅವರ ವಿರುದ್ಧ ಮುಂಬೈ ಪೊಲೀಸರು ಸಲ್ಲಿಸಿದ ಬೃಹತ್ ಚಾರ್ಜ್‌ಶೀಟ್ ಆಧರಿಸಿ ವಾದ ಮಂಡಿಸಿದ ಪಾಂಡಾ ಮತ್ತು ವಕೀಲ ಶಾರ್ದುಲ್ ಸಿಂಗ್ "ತಮ್ಮ ಕಕ್ಷೀದಾರನನ್ನು ಬಂಧನದಲ್ಲಿಡಲು ಪೊಲೀಸರು ವಾಟ್ಸಾಪ್ ಚಾಟ್ ಅವಲಂಬಿಸಲಾಗದು” ಎಂದರು.
“ಸಂಭಾಷಣೆ ನಡೆದಾಗ ರಿಪಬ್ಲಿಕ್ ಟಿವಿ ಅಸ್ತಿತ್ವದಲ್ಲಿರಲಿಲ್ಲ ಮತ್ತು ಅರ್ನಾಬ್ ಅವರು ಟೈಮ್ಸ್ ನೌ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಪ್ರಕರಣದ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಹೀಗಾಗಿ ಪಾರ್ಥೋ ಅವರನ್ನು ಇನ್ನೂ ಬಂಧನದಲ್ಲಿಡುವುದು ಅನ್ಯಾಯ” ಎಂದು ಪಾಂಡ ವಾದ ಮಂಡಿಸಿದ್ದಾರೆ. ಎಜಿಆರ್ ಔಟ್ಲಿಯರ್ ಮೀಡಿಯಾ ಕಂಪೆನಿ ಹೂಡಿದ್ದ ಪ್ರಕರಣದಲ್ಲಿ ಈ ಹಿಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರಿಪಬ್ಲಿಕ್ ಟಿವಿಯ ಉದ್ಯೋಗಿಗಳ ವಿರುದ್ಧ ದಬ್ಬಾಳಿಕೆಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದನ್ನೂ ಕೂಡ ಪಾಂಡ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
“ಅವರನ್ನು ಬಂಧಿಸಿ ಎಂದು ಹೇಳುತ್ತಿಲ್ಲ. ಆದರೆ ರಿಪಬ್ಲಿಕ್ ಟಿವಿಯ ಸಮೂಹವನ್ನು ರಕ್ಷಿಸಲಾಗುತ್ತಿದ್ದು ನಾನು ಕಂಬಿ ಎಣಿಸುತ್ತಿದ್ದೇನೆ. ವಿಭಾಗೀಯ ಪೀಠದ ಮುಂದೆ ನಿರಂತರವಾಗಿ ಬಂಧನ ಕೈಗೊಳ್ಳುವುದಿಲ್ಲ ಎಂದು ನೀವು ಹೇಳುತ್ತಿದ್ದರೂ ನಾನು ಮಾತ್ರ ಏಕೆ ಕಂಬಿಗಳ ಹಿಂದೆ ಇದ್ದೇನೆ?” ಎಂದು ಪಾರ್ಥೋ ಪ್ರಶ್ನಿಸಿದ್ದಾರೆ.
“ಆರೋಪಪಟ್ಟಿ ಪ್ರಕಾರ ಬಾರ್ಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೋಮಿಲ್ ರಾಮ್‌ಗರ್ಹಿಯಾ ಅವರು ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು ಪಾರ್ಥೋ ಅವರು ಕೇವಲ ನಿರ್ಲಕ್ಷ್ಯ ವಹಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ರಾಮ್‌ಗರ್ಹಿಯಾ ಅವರಿಗೆ ಸುಲಭವಾಗಿ ಜಾಮೀನು ನೀಡಲಾಯಿತು. ಚಾರ್ಜ್‌ಶೀಟ್ ಸಲ್ಲಿಸದಿದ್ದರೂ ಅವರ ವಿರುದ್ಧದ ತನಿಖೆ ಅಂತ್ಯಗೊಂಡಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ” ಎಂದು ಪಾರ್ಥೋ ಪರ ವಕೀಲರು ವಾದ ಮಂಡಿಸಿದರು.
ರೋಮಿಲ್ ಅವರನ್ನು ಹಗರಣದ ಕಿಂಗ್‌ಪಿನ್ ಎಂದು ಘೋಷಿಸಿದ್ದರೂ ಅವರಿಗೆ ಜಾಮೀನು ದೊರೆತಿದ್ದು ಇದನ್ನು ಮುಂಬೈ ಪೊಲೀಸರು ಪ್ರಶ್ನಿಸಿಲ್ಲ.
ಆರು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದ ಪಾರ್ಥೋ ಅವರನ್ನು ತನಿಖೆ ನಡೆಸಲು ಮುಂಬೈ ಪೊಲೀಸರಿಗೆ ಎಲ್ಲಾ ಅವಕಾಶಗಳಿದ್ದವು. ಈಗ ಅವರನ್ನು ಬಂಧನದಲ್ಲಿಡುವ ಅಗತ್ಯವಿಲ್ಲ.
ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್ ಅವರಿಂದ ಕೈಗಡಿಯಾರ, ಬೆಳ್ಳಿ ಆಭರಣಗಳನ್ನು ಸ್ವೀಕರಿಸಿದ್ದೇನೆ ಎಂಬುದು ಸುಳ್ಳು ಆರೋಪ. ಪಾರ್ಥೋ ಪತ್ನಿ ಅವುಗಳನ್ನು ಖರೀದಿಸಿದ್ದು 2000ನೇ ಇಸವಿಯ ಆಸುಪಾಸಿನಲ್ಲಿ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.
ಪಾರ್ಥೋ ಲಂಚ ಪಡೆಯುವ ಸಾರ್ವಜನಿಕ ಸೇವಕನಲ್ಲ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನ ನಿಯಮಗಳ ಉಲ್ಲಂಘನೆ ಆಗಿಲ್ಲ. ಜೊತೆಗೆ ಈ ಆರೋಪ ಕ್ರಿಮಿನಲ್ ಅಪರಾಧವಾಗದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗದು.
ಪಾರ್ಥೋ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅದನ್ನು ನ್ಯಾಯಾಲಯ ಅಲ್ಲಗಳೆಯಲಾಗದು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಶಿರ್ ಹಿರೇ ಅವರು ಮಂಗಳವಾರ ತಮ್ಮ ವಾದ ಮಂಡಿಸಲಿದ್ದಾರೆ.