Supreme Court ramesh sogemane
ಸುದ್ದಿಗಳು

ಬೇರೆ ಬೇರೆ ನ್ಯಾಯಾಲಯ/ ಅಧಿಕಾರಿಗಳೆದುರು ವ್ಯತಿರಿಕ್ತ ನಿಲುವು ತಳೆಯಲು ಕಕ್ಷಿದಾರರಿಗೆ ಅನುಮತಿ ನೀಡಲಾಗದು: ಸುಪ್ರೀಂ

ಯಾವುದೇ ಕಕ್ಷಿದಾರರ ವ್ಯತಿರಿಕ್ತ ನಿಲುವಿಗೆ ಸಮ್ಮತಿ ನೀಡಿದರೆ ಮತ್ತೊಬ್ಬ ಕಕ್ಷಿದಾರರು ಪರಿಹಾರರಹಿತವಾಗಿಬಿಡುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಇಬ್ಬರು ವಿಭಿನ್ನ ಅಧಿಕಾರಿಗಳು/ನ್ಯಾಯಾಲಯಗಳ ಮುಂದೆ ಎರಡು ವಿರೋಧಾತ್ಮಕ ನಿಲುವುಗಳನ್ನು ತೆಗೆದುಕೊಳ್ಳಲು ಕಕ್ಷಿದಾರರು ಅಥವಾ ದಾವೆದಾರರಿಗೆ ಅನುಮತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದೆ. [ಪ್ರೇಮಲತಾ ಅಲಿಯಾಸ್‌ ಸುನೀತಾ ಮತ್ತು ನಸೀಬ್ ಬೀ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಮಧ್ಯಪ್ರದೇಶ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ಸಿವಿಲ್‌ ಪ್ರಕ್ರಿಯಾ ಸಂಹಿತೆ 1908ರ ಆದೇಶ 7 ನಿಯಮ 11ರ ಅಡಿ ಪ್ರತಿವಾದಿಗಳ ಅರ್ಜಿಯನ್ನು ಮನ್ನಿಸಿ ತಮ್ಮ ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ ತಿರಸ್ಕರಿಸಿದೆ ಎಂದು ಮೇಲ್ಮನವಿದಾರರು ಸುಪ್ರೀಂ ಮೊರೆ ಹೋಗಿದ್ದರು.

ಮಧ್ಯಪ್ರದೇಶ ಭೂ ಕಂದಾಯ ಸಂಹಿತೆ 1959ರ ಸೆಕ್ಷನ್ 250ರ ಅಡಿಯಲ್ಲಿ ಮೇಲ್ಮನವಿದಾರರು ಆರಂಭದಲ್ಲಿ ಕಂದಾಯ ಅಧಿಕಾರಿ/ತಹಸೀಲ್ದಾರ್ ಮುಂದೆ ಮೂಲ ಪ್ರಕ್ರಿಯೆಗಳನ್ನು ಸಲ್ಲಿಸಿದ್ದರು. ಪ್ರತಿವಾದಿಗಳು ಆ ಅರ್ಜಿಯ ನಿರ್ವಹಣೆ ಮತ್ತು ಅಧಿಕಾರಿಗಳ ಅಧಿಕಾರ ವ್ಯಾಪ್ತಿ ವಿರುದ್ಧ ಆಕ್ಷೇಪಣೆಯ ಎತ್ತಿದ್ದರು.ಕಂದಾಯ ಅಧಿಕಾರಿ/ತಹಸೀಲ್ದಾರ್ ಆಕ್ಷೇಪಣೆ ಸ್ವೀಕರಿಸಿ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿದ್ದರು.

ನಂತರ ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮುಂದೆ ದಾವೆ ಹೂಡಿದರು. ಈ ಬಾರಿ, ಪ್ರತಿವಾದಿಗಳು ಕಂದಾಯ ಅಧಿಕಾರಿ/ತಹಸೀಲ್ದಾರ್ ಎದುರು ತೆಗೆದುಕೊಂಡಿದ್ದಕ್ಕಿಂತಲೂ ವ್ಯತಿರಿಕ್ತ ನಿಲುವನ್ನು ತೆಗೆದುಕೊಂಡು ಸಿವಿಲ್ ನ್ಯಾಯಾಲಯ ಮೊಕದ್ದಮೆಯನ್ನು ಪರಿಗಣಿಸುವ ಅಧಿಕಾರ ಹೊಂದಿಲ್ಲ ಎಂದು ಪ್ರತಿಪಾದಿಸಿದರು. ಸಿಪಿಸಿ ಆದೇಶ 7 ನಿಯಮ 11 ರ ಅಡಿಯಲ್ಲಿ ಅರ್ಜಿಯನ್ನು ಪ್ರತಿವಾದಿಗಳು ಆಕ್ಷೇಪಣೆಯ ಭಾಗವಾಗಿ ಸಲ್ಲಿಸಿದರು.

ಆದರೂ, ಸಿವಿಲ್ ನ್ಯಾಯಾಲಯ ಪ್ರತಿವಾದಿಗಳ ಅರ್ಜಿಯನ್ನು ತಿರಸ್ಕರಿಸಿತು. ಪ್ರತಿವಾದಿಗಳ ಆದ್ಯತೆಯ ಮೇಲ್ಮನವಿಯಲ್ಲಿ ಹೈಕೋರ್ಟ್, ಆಕ್ಷೇಪಣೆಯನ್ನು ಅಂಗೀಕರಿಸಿ ಮೇಲ್ಮನವಿದಾರರ ಮೊಕದ್ದಮೆಯನ್ನು ವಜಾಗೊಳಿಸಿತ್ತು. ಇದರಿಂದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ ಕದ ತಟ್ಟಿದರು.

ಹೈಕೋರ್ಟ್‌ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ಸಿವಿಲ್‌ ಪ್ರಕ್ರಿಯಾ ಸಂಹಿತೆ 1908ರ ಆದೇಶ 7 ನಿಯಮ 11ರ ಅಡಿ ಪ್ರತಿವಾದಿಗಳ ಅರ್ಜಿಯನ್ನು ತಿರಸ್ಕರಿಸಿ ಸಿವಿಲ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಊರ್ಜಿತಗೊಳಿಸಿದೆ. ಯಾವುದೇ ಕಕ್ಷಿದಾರರ ವ್ಯತಿರಿಕ್ತ ನಿಲುವಿಗೆ ಸಮ್ಮತಿ ನೀಡಿದರೆ ಮತ್ತೊಬ್ಬ ಕಕ್ಷಿದಾರರು ಪರಿಹಾರರಹಿತವಾಗಿಬಿಡುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.