Arvind Kejriwal  Facebook
ಸುದ್ದಿಗಳು

ಕೇಜ್ರಿವಾಲ್ ಜಾಮೀನು ಆದೇಶ ಕಾಯ್ದಿರಿಸುವುದಿಲ್ಲ, ವಿಚಾರಣೆ ಪೂರ್ಣಗೊಂಡ ಕೂಡಲೇ ಆದೇಶ ನೀಡಲಾಗುವುದು: ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ಕುರಿತು ವಾದಗಳು ಪೂರ್ಣಗೊಂಡ ಕೂಡಲೇ ತೀರ್ಪು ಪ್ರಕಟಿಸುವುದಾಗಿ ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ.

"ನಾನು ಆದೇಶ ಕಾಯ್ದಿರಿಸುವುದಿಲ್ಲ. ಇದು ಹೈಪ್ರೊಫೈಲ್ ವಿಷಯ ಎಂದು ಎಲ್ಲರಿಗೂ ತಿಳಿದಿದೆ. ವಾದ ಆಲಿಸಿದ ನಂತರ ನಾನು ಆದೇಶವನ್ನು ರವಾನಿಸುತ್ತೇನೆ. ತೀರ್ಪು ಕಾಯ್ದಿರಿಸುವುದಿಲ್ಲ" ಎಂದು ರಜಾಕಾಲೀನ ನ್ಯಾಯಾಧೀಶರಾದ ನಿಯಾಯ್ ಬಿಂದು ಸ್ಪಷ್ಟಪಡಿಸಿದರು.

ಕೇಜ್ರಿವಾಲ್ ಪರ ವಕೀಲರ ವಾದವನ್ನು ನ್ಯಾಯಾಲಯ ಇಂದು ಆಲಿಸಿತು. ಜಾರಿ ನಿರ್ದೇಶನಾಲಯ (ಇ ಡಿ) ಕೂಡ ಸುದೀರ್ಘ ವಾದ ಮಂಡಿಸಿತು. ಆದರೆ ವಾದ ಪೂರ್ಣಗೊಳಿಸಲು ಇಂದು ಅದಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಾಳೆ ವಾದ ಆಲಿಕೆ ಮುಂದುವರೆಸಲಿದೆ.  

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ   ಮಾರ್ಚ್‌ನಲ್ಲಿ ಬಂಧಿತರಾದ ಕೇಜ್ರಿವಾಲ್, ಮೊದಲ ಬಾರಿಗೆ ನಿಯತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ವೈದ್ಯಕೀಯ ಮಂಡಳಿಯ ಪರೀಕ್ಷೆಯಲ್ಲಿ ತಾನು ತಪಾಸಣೆಗೆ ಒಳಗಾಗುವ ವೇಳೆ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಕೂಡ ಹಾಜರಾಗಲು ಅವಕಾಶ ನೀಡುವಂತೆ ಕೋರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಿತು. ಈ ಸಂಬಂಧ ತಿಹಾರ್ ಜೈಲಿನಿಂದ ಈ ಹಿಂದೆ ನ್ಯಾಯಾಲಯ ವರದಿ ಕೇಳಿತ್ತು.

ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದು ಜೈಲಿನೊಳಗೆ ಚಿಕಿತ್ಸೆ ನೀಡುವಂತಹ ಪರಿಹಾರ ಕೋರಿದ್ದಾರೆ. ಇದರಲ್ಲಿ ಇ ಡಿಗೆ ಯಾವುದೇ ಪಾತ್ರ ಇಲ್ಲದಿರುವುದರಿಂದ ತಾನು ತಿಹಾರ್ ಜೈಲಿನಿಂದ ಪ್ರತಿಕ್ರಿಯೆ ಕೇಳುತ್ತಿದ್ದೇನೆಯೇ ವಿನಾ ಇ ಡಿಯಿಂದಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.  

ಜಾಮೀನು ಕೋರಿ ಕೇಜ್ರಿವಾಲ್‌ ಪರ ಹಿರಿಯ ವಕೀಲ ವಿಕ್ರಮ್ ಚೌಧರಿ ವಾದ ಮಂಡಿಸಿದರು. ಕಳಂಕಿತರು ಮಾತ್ರವಲ್ಲದೆ ಬಂಧನಕ್ಕೊಳಗಾದವರ ಹೇಳಿಕೆಗಳನ್ನು ಆಧರಿಸಿ ಕೇಜ್ರಿವಾಲ್‌ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಗೆ ಕ್ಷಮಾದಾನ ನೀಡುವುದಾಗಿ ಆಮಿಷವೊಡ್ಡಿ ಕೇಜ್ರಿವಾಲ್‌ ಅವರ ವಿರುದ್ಧ ಸಾಕ್ಷ್ಯ ನುಡಿಯುವಂತೆ ಮಾಡಲಾಗಿದೆ. ಇವರ ವಿಶ್ವಾಸಾರ್ಹತೆ ಪ್ರಶ್ನಾರ್ಹ. ಕೇಜ್ರಿವಾಲ್‌ ವಿರುದ್ಧದ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು ಸಾಕ್ಷ್ಯಗಳಿಗೆ ದೃಢೀಕರಣದ ಕೊರತೆ ಇದೆ ಎಂದರು.

ಪ್ರಕರಣದಲ್ಲಿ ಲೋಕಸಭಾ ಸದಸ್ಯ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಮಗ ರಾಘವ ಮಾಗುಂಟ ರೆಡ್ಡಿ ಮಾಫಿಸಾಕ್ಷಿಯಾಗಿದ್ದಾರೆ. ಆದರೆ ಅವರ ತಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಭಾಗವಾಗಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲೇ ಕೇಜ್ರಿವಾಲ್‌ ಬಂಧನವಾಗಿದೆ ಇದು ಪ್ರಶ್ನಾರ್ಹ. ಪ್ರಕರಣದಲ್ಲಿ ಇ ಡಿ ಪಾತ್ರ ದಯನೀಯವಾಗಿದೆ. ಯಾವುದೇ ಹಣದ ಜಾಡು ಪತ್ತೆಯಾಗಿಲ್ಲ. ಅದನ್ನು ದೃಢೀಕರಿಸುವ ಸಾಕ್ಷ್ಯಗಳಿಲ್ಲ ಎಂದು ವಾದ ಮಂಡಿಸಿದರು. ಅಲ್ಲದೆ ಕೇಜ್ರಿವಾಲ್‌ ಅವರಿಗೆ ಇರುವ ಕಾಯಿಲೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಇತ್ತ ಇ ಡಿಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ಕೇಜ್ರಿವಾಲ್‌ ಅವರಿಗೆ ಪ್ರಕರಣದಲ್ಲಿ ಸಮನ್ಸ್‌ ನೀಡಿಲ್ಲ ಆದರೆ ಪ್ರಾಸಿಕ್ಯೂಷನ್‌ ದೂರು ದಾಖಲಾಗಿದ್ದು ವಿಶೇಷ ನ್ಯಾಯಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ. ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ನೀಡಿದ ಕುರಿತಂತೆ ಸುಪ್ರೀಂ ಕೋರ್ಟ್‌ ಇನ್ನಷ್ಟೇ ತೀರ್ಪು ನೀಡಬೇಕಿದೆ ಎಂದರು.

ಸಿಬಿಐ ತನಿಖೆಯಲ್ಲೂ ಕೇಜ್ರಿವಾಲ್ ಪಾತ್ರವಿದೆ. ಬಂಧನದ ಕಾಲಾವಧಿ ಇಲ್ಲಿ ಅಪ್ರಸ್ತುತವಾಗುತ್ತದೆ. ಇ ಡಿ ವಾದ ಮಾಫಿಸಾಕ್ಷಿಗಳನ್ನು ಆಧರಿಸಿದೆ ಎಂಬ ವಾದದಲ್ಲಿ ಹುರುಳಿಲ್ಲ. ಪುಸಲಾಯಿಸಿ ಅವರಿಂದ ಸಾಕ್ಷ್ಯ ಪಡೆದಿಲ್ಲ. ಬದಲಿಗೆ ಕಾನೂನು ಪ್ರಕಾರವೇ ಆ ಕಾರ್ಯ ನಡೆದಿದೆ ಎಂದು ಅವರು ಸಮರ್ಥಿಸಿಕೊಂಡರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ಬಂಧಿತರಾದ ಕೇಜ್ರಿವಾಲ್, ಮೊದಲ ಬಾರಿಗೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.