CJI DY Chandrachud and Supreme Court
CJI DY Chandrachud and Supreme Court 
ಸುದ್ದಿಗಳು

ಹಣಕಾಸು ಮಸೂದೆ ರೂಪದಲ್ಲಿ ಕಾಯಿದೆ ಜಾರಿ: 7 ನ್ಯಾಯಮೂರ್ತಿಗಳ ಪೀಠ ರಚಿಸುವ ಮನವಿ ಪರಿಗಣಿಸುವುದಾಗಿ ತಿಳಿಸಿದ ಸಿಜೆಐ

Bar & Bench

ಸಂಸತ್ತಿನಲ್ಲಿ ಕಾನೂನುಗಳನ್ನು ಹಣದ ಮಸೂದೆಗಳಾಗಿ ಅಂಗೀಕರಿಸುವುದು ಸೇರಿದಂತೆ ಕೆಲವು ಸಾಂವಿಧಾನಿಕ ಪ್ರಕರಣಗಳ ವಿಚಾರಣೆಗೆ 7 ನ್ಯಾಯಮೂರ್ತಿಗಳ ಪೀಠ ರಚಿಸುವ ಮನವಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ಹೇಳಿದ್ದಾರೆ.

ಹಣಕಾಸು ಮಸೂದೆಗಳಿಗೆ ಸಂಬಂಧಿಸಿದ ಪ್ರಕರಣವನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಸ್ತಾಪಿಸಿದಾಗ ಸಿಜೆಐ ಈ ವಿಚಾರ ತಿಳಿಸಿದ್ದಾರೆ.

ಸಿಂಘ್ವಿ ಅವರು “ಹಣಕಾಸು ಮಸೂದೆ ಕುರಿತಾದ ಪ್ರಕರಣ 7 ನ್ಯಾಯಮೂರ್ತಿಗಳ ಪೀಠಕ್ಕೆ ಸೇರಿದ್ದಾಗಿದೆ. ಇದನ್ನು ಕೂಡಲೇ ರಚಿಸಲು ಸಾಧ್ಯವಿಲ್ಲ ಎಂಬುದು ನನಗೆ ಅರ್ಥವಾಗುತ್ತದೆ. ರೋಜರ್‌ ಮ್ಯಾಥ್ಯೂ ಅವರು ಮುಖ್ಯ ಮನವಿದಾರರಾಗಿದ್ದಾರೆ" ಎಂದರು.

ಆಗ ಸಿಜೆಐ “ನಾನು  7 ನ್ಯಾಯಮೂರ್ತಿಗಳ ಪೀಠ ರಚಿಸಲು ಬಯಸುತ್ತಿದ್ದೇನೆ. ನೋಡೋಣ” ಎಂದು ಹೇಳಿದರು.

ಹಣಕಾಸು ಮಸೂದೆಗಳು ತೆರಿಗೆಗಳನ್ನು ವಿಧಿಸಲು ಮತ್ತು ಸಂಚಿತನಿಧಿಯಿಂದ ಹಣ ವಿನಿಯೋಗಿಸಲು ಪ್ರತ್ಯೇಕ ನಿಬಂಧನೆಗಳನ್ನು ಒಳಗೊಂಡ ಮಸೂದೆಗಳಾಗಿದ್ದು ಅವುಗಳನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದಾಗಿದೆ. ರಾಜ್ಯಸಭೆ ಹಣಕಾಸು ಮಸೂದೆಗಳಿಗೆ ತಿದ್ದುಪಡಿಗಳನ್ನಷ್ಟೇ ಸೂಚಿಸಬಹುದಾಗಿದೆ.

ಹಣಕಾಸು ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆ ಮಾಡುವ ಶಿಫಾರಸುಗಳನ್ನು ಲೋಕಸಭೆ ಒಪ್ಪಲೇ ಬೇಕೆಂದೇನೂ ಇಲ್ಲ. ಅವುಗಳನ್ನು ತಿರಸ್ಕರಿಸಲೂಬಹುದು.

ನವೆಂಬರ್ 2019 ರಲ್ಲಿ, ಸುಪ್ರೀಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಹಣಕಾಸು ಕಾಯಿದೆ- 2017 ಅನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸುವುದರ ಸಿಂಧುತ್ವವನ್ನು ವಿಸ್ತೃತ ಪೀಠ ನಿರ್ಧರಿಸಬೇಕು ಎಂದು ಆದೇಶಿಸಿತ್ತು.

ನ್ಯಾಯಮಂಡಳಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಯೋಜನೆಗಳನ್ನು ಪರಿಷ್ಕರಿಸಿದ ಹಣಕಾಸು ಕಾಯಿದೆ- 2017 ಅನ್ನು ಪ್ರಶ್ನಿಸುವುದೂ ಸೇರಿದಂತೆ ನ್ಯಾಯಮಂಡಳಿಗಳ ಕಾರ್ಯನಿರ್ವಹಣೆ  ಕುರಿತಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆ ನೀಡಿದ ಎಲ್ಲಾ ಸಲಹೆಗಳನ್ನು ಮೂಲೆಗುಂಪು ಮಾಡಿ ಏಪ್ರಿಲ್ 1, 2017 ರಂದು ಕಾಯಿದೆ ರೂಪಿಸಲಾಗಿತ್ತು.

ಹಣಕಾಸ ಮಸೂದೆಯ ರೂಪದಲ್ಲಿ ಹಣಕಾಸು ಕಾಯಿದೆಯನ್ನು ಅಂಗೀಕರಿಸುವುದು ಸಂಪೂರ್ಣ ಅನುಚಿತ ಮತ್ತು ಸಂವಿಧಾನಕ್ಕೆ ಮಾಡುವ ವಂಚನೆ ಎಂಬುದು ಅರ್ಜಿದಾರರ ವಾದವಾಗಿತ್ತು. ಆಧಾರ್‌ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ಎತ್ತಿಹಿಡಿದಿತ್ತು. ತೀರ್ಪನ್ನು 5 ನ್ಯಾಯಮೂರ್ತಿಗಳ ಪೀಠ ನೀಡಿರುವುದರಿಂ ಸುಪ್ರೀಂ ಕೋರ್ಟ್‌ ಪ್ರಕರಣವನ್ನು  7 ನ್ಯಾಯಮೂರ್ತಿಗಳ ಪೀಠಕ್ಕೆ ನೀಡಲು ನಿರ್ಧರಿಸಿದೆ.

ಕುತೂಹಲಕಾರಿ ಸಂಗತಿ ಎಂದರೆ ಆಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಪ್ರಸಕ್ತ ಸಿಜೆಐ ಚಂದ್ರಚೂಡ್‌ ಅವರು ಆಧಾರ್‌ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡುತ್ತಾ ಆಧಾರ್‌ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಲು ಸಾಧ್ಯವಿಲ್ಲ ಎಂದಿದ್ದರು.