Baba Ramdev and Acharya Balkrishna 
ಸುದ್ದಿಗಳು

ಹಾದಿ ತಪ್ಪಿಸುವ ಜಾಹೀರಾತು: ಸುಪ್ರೀಂನಲ್ಲಿ ಬೇಷರತ್‌ ಕ್ಷಮೆ ಕೋರಿದ ಪತಂಜಲಿ, ಬಾಬಾ ರಾಮದೇವ್‌, ಆಚಾರ್ಯ ಬಾಲಕೃಷ್ಣ

ಪತಂಜಲಿ ಆಯುರ್ವೇದದ ಬಗ್ಗೆ ನ್ಯಾಯಾಲಯವು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ ಹೊರತಾಗಿಯೂ 2023ರ ನವೆಂಬರ್‌ನಲ್ಲಿ ಮಾಧ್ಯಮ ಗೋಷ್ಠಿ ನಡೆಸುವ ಮೂಲಕ ಪ್ರಕರಣದ ಬಗ್ಗೆ ಮಾತನಾಡಿರುವುದಕ್ಕೆ ರಾಮದೇವ್‌ ಕ್ಷಮೆಯಾಚಿಸಿದ್ದಾರೆ.

Bar & Bench

ಪತಂಜಲಿ ಆಯುರ್ವೇದ ನೀಡಿದ್ದ ದಾರಿ ತಪ್ಪಿಸುವ ಮತ್ತು ಆಧುನಿಕ ವೈದ್ಯ ಪದ್ಧತಿ ವಿರೋಧಿಸಿ ಜಾಹೀರಾತು ನೀಡಿದ್ದಕ್ಕೆ ಅದರ ಸಂಸ್ಥಾಪಕ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

ಪತಂಜಲಿ ಮತ್ತು ಅದರ ಸಂಸ್ಥಾಪಕರು ಕೋವಿಡ್‌-19 ಔಷಧಿ ಮತ್ತು ಆಧುನಿಕ ವೈದ್ಯ ಪದ್ಧತಿಯ ವಿರುದ್ಧ ನಡೆಸಿರುವ ಅಪಪ್ರಚಾರಕ್ಕೆ ಆಕ್ಷೇಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಏಪ್ರಿಲ್‌ 6ರಂದು ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ರಾಮದೇವ್‌ ಮತ್ತು ಆಚಾರ್ಯ ಅವರು ದಾರಿ ತಪ್ಪಿಸುವ ಜಾಹೀರಾತು ಪ್ರಸಾರ ಮಾಡುವುದಿಲ್ಲ ಎಂದು ನೀಡಿದ್ದ ಮುಚ್ಚಳಿಕೆ ಮೀರಿರುವುದಕ್ಕೂ ಸರ್ವೋಚ್ಚ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ. “ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯನ್ನು ಉಲ್ಲಂಘನೆ ಮಾಡಿರುವುದಕ್ಕೆ ನಾವು ಕ್ಷಮೆ ಕೋರುತ್ತೇವೆ. ಕಾನೂನಿನ ಘನತೆಯನ್ನು ಯಾವಾಗಲೂ ಎತ್ತಿ ಹಿಡಿಯುತ್ತೇವೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಪತಂಜಲಿ ಆಯುರ್ವೇದದ ಬಗ್ಗೆ ನ್ಯಾಯಾಲಯವು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ ಹೊರತಾಗಿಯೂ 2023ರ ನವೆಂಬರ್‌ನಲ್ಲಿ ಮಾಧ್ಯಮ ಗೋಷ್ಠಿ ನಡೆಸುವ ಮೂಲಕ ಪ್ರಕರಣದ ಬಗ್ಗೆ ಮಾತನಾಡಿರುವುದಕ್ಕೂ ರಾಮದೇವ್‌ ಕ್ಷಮೆಯಾಚಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸುತ್ತೇವೆ ಮತ್ತು ಕಾನೂನಿನ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ರಾಮದೇವ್‌ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಏಪ್ರಿಲ್‌ 2ರಂದು ತಾತ್ಸಾರದಿಂದ ಕೂಡಿದ ಕ್ಷಮಾಪಣಾ ಅರ್ಜಿ ಸಲ್ಲಿಸಲಾಗಿದೆ ಎಂದು ಪತಂಜಲಿಯ ವಿರುದ್ಧ ನ್ಯಾಯಾಲಯ ಗುಡುಗಿತ್ತು. ಇದಕ್ಕೂ ಮುನ್ನ, ಪತಂಜಲಿ ಆಕ್ಷೇಪಾರ್ಹವಾದ ಜಾಹೀರಾತಿನ ವಿರುದ್ಧ ನಿರ್ಬಂಧ ಆದೇಶ ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು ಪತಂಜಲಿ, ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿತ್ತು.

2023ರ ನವೆಂಬರ್‌ನಲ್ಲಿ ಪತಂಜಲಿ ಔಷಧಗಳು ರೋಗ ಗುಣಪಡಿಸಲಿವೆ ಎಂದು ನೀಡಿದ್ದ ಪ್ರತಿ ಜಾಹೀರಾತಿನ ಮೇಲೆ ತಲಾ ₹1 ಕೋಟಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿತ್ತು. ಅದಾಗ್ಯೂ, ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಪತಂಜಲಿ ಜಾಹೀರಾತುಗಳ ವಿರುದ್ಧ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.